ಜಗಜ್ಯೋತಿ ಬಸವಣ್ಣ ಸಾಂಸ್ಕೃತಿಕ ರಾಯಬಾರಿಯಲ್ಲ; ಅವರು ಸಾಂಸ್ಕೃತಿಕ ನಾಯಕ…

2

ಶಿವಮೊಗ್ಗ: ನಗರದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ವತಿಯಿಂದ ಇಂದು ವಿಶ್ವಮಾನವ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಗಾಂಧಿ ಪಾರ್ಕ್ ಮುಂಭಾಗ ಇರುವ ಬಸವಣ್ಣನ ಪ್ರತಿಮೆಗೆ ಸಮಾಜದ ಪ್ರಮುಖರ ಉಪಸ್ಥಿತಿಯಲ್ಲಿ ಮಾಲಾರ್ಪಣೆ ಮಾಡಲಾಯಿತು.
ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಸವಣ್ಣ ಅವರು ಸಾಂಸ್ಕೃತಿಕ ರಾಯಭಾರಿ ಅಲ್ಲ, ಅವರು ಸಾಂಸ್ಕೃತಿಕ ನಾಯಕ ಎಂದರು.
ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳು ಜಗತ್ತಿಗೆ ಮಾದರಿ ಮತ್ತು ಇಂದಿಗೂ ಪ್ರಸ್ತುತ. ಅವರ ತತ್ವಾದರ್ಶಗಳು ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಬಸವಣ್ಣ ಅವರ ಆಡಳಿತ ವ್ಯವಸ್ಥೆ ಸರ್ವಕಾಲಕ್ಕೂ ಮಾದರಿ. ಎಲ್ಲಾ ಧರ್ಮಗಳಿಗೂ ಸಮಾನತೆಯನ್ನು ಸಾರಿದ ಬಸವಣ್ಣನವರ ವಚನಗಳು ಸರ್ವಕಾಲಿವಾಗಿದ್ದು ಸರ್ವಧರ್ಮ ಗಳಿಗೂ ಪ್ರಸ್ತುತವಾಗಿದೆ ಎಂದರು. ಕಾಯಕವೇ ಕೈಲಾಸ ಎಂದು ಸಾರಿದವರು ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ ಎಂದು ಹೇಳುತ್ತಾ ಸಮಾಜದಲ್ಲಿ ಹೆಣ್ಣು ಗಂಡು ಎಂಬ ತಾರತಮ್ಯವಿಲ್ಲದೆ ಸಮಾಜವನ್ನು ಬೆಳೆಸಬೇಕು ಎಂದು ಹೇಳಿದ್ದರು.
ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸುವುದರಿಂದ ಸಮಾಜದಲ್ಲಿ ಸುಖ ಶಾಂತಿ ಲಭಿಸುತ್ತದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ವಿಧಾನ ಪರಿಷತ್ ಶಾಸಕ ರುದ್ರೇಗೌಡ, ಮಾಜಿ ಶಾಸಕ ಹೆಚ್.ಎಂ. ಚಂದ್ರಶೇಖರಪ್ಪ, ಪ್ರಮುಖರಾದ ಹೆಚ್.ವಿ. ಮಹೇಶ್ವರಪ್ಪ, ಎಸ್.ಪಿ. ದಿನೇಶ್, ಎನ್.ಜೆ. ರಾಜಶೇಖರ್, ತಾರಾನಾಥ್, ಮಹೇಶ್‌ಮೂರ್ತಿ, ಪಿ.ರುದ್ರೇಶ್, ಬಳ್ಳಕೆರೆ ಸಂತೋಷ್, ವಿಜಯಕುಮಾರ್, ಶಾಂತಾ ಆನಂದ್, ಅನಿತಾ ರವಿಶಂಕರ್, ಗಣೇಶ ಅಂಗಡಿ, ಬಿ. ಚನ್ನಬಸಪ್ಪ ಮತ್ತಿತರರಿದ್ದರು.
ಸಮಾರಂಭದ ನಂತರ ಸಮಾಜ ದಿಂದ ನಗರದ ವಿವಿಧೆಡೆ ಬಸವ ಜಯಂತಿ ನಿಮಿತ್ತ ಅಂಬಲಿ ದಾಸೋಹ, ಪ್ರಸಾದ ವಿತರಣೆ ನಡೆಯಿತು.