ಮೈತ್ರಿ ಧರ್ಮ ಪಾಲನೆಯಲ್ಲಿ ಜಿಲ್ಲಾ ಬಿಜೆಪಿಯಿಂದ ಹೆಜ್ಜೆ ಹೆಜ್ಜೆಗೂ ಎಡವಟ್ಟು…
ಶಿವಮೊಗ್ಗ: ಲೋಕಸಭಾ ಚುನಾವಣೆ ಘೋಷಣೆ ಆದಾಗಿನಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಕುರಿತು ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಒಂದಿಲ್ಲೊಂದು ಎಡವಟ್ಟುಗಳು ನಡೆಯುತ್ತಲೇ ಇದೆ.
ಮೇ ೭ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ಈಗಾಗಲೇ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತ್ತು ಪಕ್ಷೇತರ (ಬಿಜೆಪಿ ಬಂಡಾಯ) ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರಗಳು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ವಿಶೇಷವಾಗಿ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ವಿಧಾನ ಕ್ಷೇತ್ರದಲ್ಲಿ ಜೆಡಿಎಸ್ ಅತ್ಯಂತ ಬಲಿಷ್ಟವಾಗಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಮತಿ ಶಾರದಾ ಪೂರ್‍ಯಾನಾಯ್ಕ ಹಾಲಿ ಶಾಸಕರಾಗಿದ್ದರೆ, ಭದ್ರಾವತಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶಾರದಾ ಅಪ್ಪಾಜಿ ಗೌಡ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಈ ಎರಡು ವಿಧಾನ ಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಷ್ಟೇನು ಪ್ರಾಭಲ್ಯ ಹೊಂದಿಲ್ಲ. ಅಲ್ಲದೆ ಜಿಲ್ಲಾ ಜೆಡಿಎಸ್ ನಲ್ಲಿ ಕೂಡ ಎಂ.ಶ್ರೀಕಾಂತ್ ಜೆಡಿಎಸ್ ತ್ಯಜಿಸಿದ ನಂತರ ಪಕ್ಷ ಸಂಘಟನೆ ದೃಷ್ಟಿಯಲ್ಲಿ ಸ್ಟ್ರಾಂಗ್ ಅಂಡ್ ಮಾಸ್ ಲೀಡರ್‌ಗಳ ಕೊರತೆ ಎದ್ದುಕಾಣುತ್ತಿದೆ. ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಸುಮಾರು ೩ ಸಾವಿರ ಮತಗಳು ಬರುತ್ತಿದ್ದವು. ಆದರೆ ಎಂ. ಶ್ರೀಕಾಂತ್ ಅವರು ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತ ನಂತರ ಅದು ೨೩ ಸಾವಿರಕ್ಕೂ ಅಧಿಕ ಮತಗಳಿಗೆ ಹೆಚ್ಚಳ ವಾಯಿತು. ಅವರ ನಂತರ ಸ್ಪರ್ಧಿಸಿದ್ದ ನಿವೃತ್ತ ಇಂಜಿನಿಯರ್ ನಿರಂಜನ್ ಅವರಿಗೆ ವಿಧಾನಸಭಾ ಚುನಾವಣೆ ಯಲ್ಲಿ ಸ್ವಪಕ್ಷೀಯರ ಅಸಹಕಾರದ ನಡುವೆಯೂ ೫ಸಾವಿರಕ್ಕೂ ಅಧಿಕ ಮತಗಳನ್ನು ತಮ್ಮ ಸ್ವಸಾಮರ್ಥ್ಯದಿಂದ ಪಡೆದಿದ್ದರೆ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಲಿಷ್ಠ ಕಾರ್ಮಿಕ ಮುಖಂಡ ಆಯ್ನೂರ್ ಮಂಜುನಾಥ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ದ್ದರು. ಅವರಿಗೆ ಅಂದಿನ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್, ಮಾಜಿ ಶಾಸಕ ಹಾಗೂ ಹಾಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮತ್ತು ತಂಡ ಹಾಗೂ ಇಡೀ ಜಿಲ್ಲಾ ಜೆಡಿಎಸ್ ಪ್ರಮುಖರ ಸಹಕಾರವಿದ್ದರೂ ಸಹ ಅವರು ಗಳಿಸಿದ್ದು ಕೇವಲ ೭ಸಾವಿರ ಪ್ಲಸ್ ಮತಗಳು.
ಇನ್ನುಳಿದಂತೆ ಸಾಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ, ಬೈಂದೂರು ವಿಧಾನ ಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪ್ರಾಭಲ್ಯ ಅಷ್ಟಕ್ಕಷ್ಟೇ ಎನ್ನಬಹುದು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಲೋಕಸಭಾ ಸಭಾ ಚುನಾವಣೆಗೆ ಮೈತ್ರಿ ಧರ್ಮ ಪಾಲಿಸುವಲ್ಲಿ ಬಿಜೆಪಿ ಪ್ರತಿ ಹೆಜ್ಜೆಯಲ್ಲೂ ಎಡವುತ್ತಿದೆ. ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ಕರಪತ್ರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಜೆಡಿಎಸ್ ಕೋರ್ ಕಮಿತಿ ಸದಸ್ಯ ಕೆ.ಬಿ. ಪ್ರಸನ್ನಕುಮಾರ್ ಮತ್ತು ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಅವರ ಭಾವಚಿತ್ರ ಮಾತ್ರ ಮುದ್ರಿಸಲಾ ಗಿದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್‍ಯಾ ನಾಯ್ಕ ಹಾಗೂ ಭದ್ರಾವತಿ ಕ್ಷೇತ್ರದ ಪ್ರಮುಖ ನಾಯಕಿ ಶಾರದಾ ಅಪ್ಪಾಜಿ ಗೌಡರ ಫೋಟೋಗಳನ್ನು ಕೈಬಿಟ್ಟಿರು ವುದು ಏಕೆ ಎಂಬ ಪ್ರಶ್ನೆ ಕಾಡುತ್ತಿದ್ದು, ಇದು ಶಿವಮೊಗ್ಗ ಗ್ರಾಮಾಂತರ ಮತ್ತು ಭದ್ರಾವತಿ ಭಾಗದ ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ಜೆಡಿಎಸ್ ಮಟ್ಟಿಗೆ ಶಿವಮೊಗ್ಗ ಗ್ರಾಮಾಂತರ ಜೆಡಿಎಸ್‌ನ ಹಾಲಿ ಶಾಸಕಿ ಹಾಗೂ ಶಾಸಕಾಂಗ ಪಕ್ಷ ಉಪನಾಯಕಿ ಶಾರದಾ ಪೂರ್‍ಯಾನಾಯ್ಕ ಮತ್ತು ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿಗೌಡ ಅವರೇ ಪ್ರಮುಖ ನಾಯಕರಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಅಧಿಕ ಸಂಖ್ಯೆಯ ಮತಗಳನ್ನು ಬರುವಂತೆ ಮಾಡುವ ಶಕ್ತಿಹೊಂದಿದ್ದಾರೆ.
ಜಿಲ್ಲಾ ಜೆಡಿಎಸ್‌ನಲ್ಲಿ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರು ಬಲಿಷ್ಠ ನಾಯಕಿಯಾಗಿದ್ದಾರೆ. ಅವರು ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಸ್ಪರ್ಧಿಸಿ ಒಮ್ಮೆ ಅಲ್ಪ ಮತಗಳಿಂದ ಪರಾಭವಗೊಂಡಿದ್ದು, ಎರಡು ಬಾರಿ ವಿಜಯಮಾಲೆ ಧರಿಸಿ ಈಗ ಎರಡನೇ ಬಾರಿಗೆ ಹಾಲಿ ಶಾಸಕರಾದ್ದಾರೆ. ಆದರೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಜೆಡಿಎಸ್‌ನ ಪಕ್ಷನಿಷ್ಠ ನಾಯಕಿಯ ಕಡೆಗಣನೆ ಪಕ್ಷದ ಮೂಲ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಇತ್ತ ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಪ್ರಶ್ನಾತೀತ ನಾಯಕರಾಗಿದ್ದ ಅಪ್ಪಾಜಿ ಗೌಡರ ನಿಧನಾನಂತರ ಅವರ ಧರ್ಮಪತ್ನಿ ಶಾರದಾ ಅಪ್ಪಾಜಿಗೌಡ ಅವರು ರಾಜಕೀಯವಾಗಿ ಮುನ್ನಲೆಗೆ ಬಂದು ಅಪ್ಪಾಜಿಗೌಡರ ಸ್ಥಾನ ಅಲಂಕರಿಸುವ ಮೂಲಕ ಈ ಭಾಗ ಬಲಿಷ್ಠ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಕರಪತ್ರದಲ್ಲಿ ಇವರ ಕಡೆಗಣನೆ ಈ ಕ್ಷೇತ್ರದ ಕಾರ್ಯಕರ್ತರು ಮತ್ತು ನಾಯಕರಲ್ಲಿ ಆಕ್ರೊಶ ಬುಗಿಲೇಳುವಂತೆ ಮಾಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕೆಲವೆಡೆ ಬಿಜೆಪಿ ನಾಯಕರು ಜೆಡಿಎಸ್‌ನ ಬಲಿಷ್ಠ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಎಸ್ ಪ್ರಾಭಲ್ಯವಿರುವ ಈ ಎರಡು ಕ್ಷೇತ್ರಗಳ ಪ್ರಬಲ ನಾಯಕಿಯರ ಫೋಟೋಗಳನ್ನೇ ಕರಪತ್ರದಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಿರುವುದು ಇದೀಗ ಜೆಡಿಎಸ್ ಪಾಳೇಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಏ.೨೯ರಂದು ನಗರದ ಹೊರವಲಯದ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರ ಮತ್ತು ನಾಯಕರ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ ಪಾಲ್ಗೊಂಡಿದ್ದ ಈ ಭಾಗದ ಕಾರ್ಯಕರ್ತರು ಮತ್ತು ನಾಯಕರ ಸಂಖ್ಯೆಯನ್ನು ಗಮನಿಸಿದರೆ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರ ಜನಪ್ರಿಯತೆ ಮತ್ತು ಪ್ರಾಭಲ್ಯ ತಿಳಿಯುತ್ತದೆ ಎಂದು ಸ್ವತಃ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಸ್ವಪಕ್ಷೀಯ ಮಾಜಿ ಶಾಸಕರ ಸಮ್ಮುಖದಲ್ಲಿ ಹೇಳಿದರು. ಆದರೆ ಸಂಸದ ಬಿವೈಆರ್ ಅವರು ಚುನಾವಣಾ ಕರಪತ್ರವನ್ನು ಗಮನಿಸಲಿಲ್ಲವೇ ಎಂದು ಅಲ್ಲಿ ನೆರೆದಿದ್ದ ಗ್ರಾಮಾಂತರ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದರು.
ಜೆಡಿಎಸ್ ಜಿಲ್ಲಾಧ್ಯಕ್ಷರ ಮೌನವೇಕೆ…?!
ಶಿವಮೊಗ್ಗ ಜಿಲ್ಲಾ ಜೆಡಿಎಸ್‌ನ ಸಾರಥ್ಯ ವಹಿಸಿಕೊಂಡಿರುವ ಕಡಿದಾಳ್ ಗೋಪಾಲಗೌಡರು ಓರ್ವ ಪ್ರಬುದ್ಧ ರಾಜಕಾರಣಿಯಂತೆ ವರ್ತಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸ್ವಪಕ್ಷೀಯ ಶಾಸಕಿಯೋರ್ವರ ಹೆಸರು ಮತ್ತು ಭಾವಚಿತ್ರವನ್ನು ಲೋಕಸಭಾ ಮೈತ್ರಿ ಅಭ್ಯರ್ಥಿಯ ಚುನಾವಣಾ ಕರಪತ್ರದಲ್ಲಿ ಕೈಬಿಟ್ಟಿರುವುದನ್ನು ಪ್ರಶ್ನಿಸದೆ ಸುಮ್ಮನಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿಂದೆ ಜಿಲ್ಲಾ ಜೆಡಿಎಸ್ ಕಾರ್‍ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಗೆ ಆಗಮಿಸಿದ್ದ ಸಂಸದ ಬಿವೈ ರಾಘವೇಂದ್ರರೊಂದಿಗೆ ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷಗಳ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಚರ್ಚಿಸುವುದನ್ನು ಬಿಟ್ಟು ತಮಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ಪಾಸ್ ಕೊಡಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದ ಜಿಲ್ಲಾಧ್ಯಕ್ಷ ಮತ್ತು ಜಿಲ್ಲಾ ಕಾರ್‍ಯಾಧ್ಯಕ್ಷರಿಗೆ ಚುನಾವಣಾ ಕರಪತ್ರದಲ್ಲಿ ಸ್ವಪಕ್ಷೀಯ ಹಾಲಿ ಶಾಸಕಿಯ ಭಾವಚಿತ್ರ ಇಲ್ಲದಿರುವುದು ಕಾಣಲಿಲ್ಲವೇ ಅಥವಾ ಅವರ ಕಡೆಗಣನೆಗೆ ಇವರ ಕಾಣಿಕೆ ಇದೆಯೇ ಎಂಬ ಸಂಶಯ ಮೂಡುತ್ತಿದೆ.
ಮಾಹಿತಿ ಕೊರತೆಯೋ… ತಪ್ಪು ಮಾಹಿತಿಯೋ…?
ಜಿಲ್ಲಾ ಬಿಜೆಪಿಗೆ ಜೆಡಿಎಸ್ ಕುರಿತು ಮಾಹಿತಿ ಕೊರತೆಯೋ ಅಥವಾ ಜೆಡಿಎಸ್ ನಾಯಕರಿಂದ ತಪ್ಪು ಮಾಹಿತಿ ರವಾನೆಯಾಗುತ್ತಿದೆಯೋ…? ಇಲ್ಲವೇ ವಿಶ್ವಾಸ ದ್ರೋಹದ ಆಟವೋ..? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತಿದೆ. ಅದೇ ರೀತಿ ಬಿಜೆಪಿ ಜಿಲ್ಲಾ ನಾಯಕರ ಒಂದು ತಂಡ ಪಕ್ಷದ ಅಧಿಕೃತ ಅಭ್ಯರ್ಥಿ ಯೊಂದಿಗಿದ್ದು, ಈ ರೀತಿಯ ಗೊಂದಲಗಳನ್ನು ಮೂಡಿಸುವ ಮೂಲಕ ವಿಶ್ವಾಸದ್ರೋಹ ಮಾಡುತ್ತಾ, ಇನ್ಯಾರದೋ ಪರ ಬ್ಯಾಟ್ ಬೀಸುತ್ತಿರುವಂತೆ ಕಾಣಬರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಅಭ್ಯರ್ಥಿ ಬಿವೈಆರ್ ಮತ್ತವರ ಆಪ್ತ ವಲಯದವರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.
ಜೆಡಿಎಸ್ ಜಿಲ್ಲಾ ವಕ್ತಾರರು ಎಲ್ಲಿದ್ದಾರೆ…?
ಇತ್ತೀಚೆಗೆ ನಗರದ ಪತ್ರಿಕೆಯೊಂದರಲ್ಲಿ ಬಿಜೆಪಿಯಿಂದ ಜೆಡಿಎಸ್ ಕಡೆಗಣನೆ ಎಂಬ ಸುದ್ದಿ ಪ್ರಕಟವಾಗಿದ್ದು, ಈ ಸುದ್ದಿಯಲ್ಲಿ ಜೆಡಿಎಸ್‌ನ ಯಾವ ನಾಯಕರ ಹೆಸರನ್ನೂ ಬಿಂಬಿಸಿರಲಿಲ್ಲ. ಆದರೆ ಮರುದಿನ ಜೆಡಿಎಸ್‌ನ ಜಿಲ್ಲಾ ವಕ್ತಾರರು ಹೇಳಿಕೆಯೊಂದನ್ನು ನೀಡಿ, ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯಂತೆ ಏನೂ ಇಲ್ಲ ಮೈತ್ರಿಯಲ್ಲಿ ಎಲ್ಲವೂ ಸರಿ ಇದೆ ಎಂದು ಹೇಳಿಕೆ ನೀಡಿದ್ದರು. ಆದರೆ ಚುನಾವಣಾ ಕರಪತ್ರದಲ್ಲಿ ಜಿಲ್ಲೆಯ ಏಕೈಕ ಶಾಸಕಿಯಾಗಿ ಆಯ್ಕೆಯಾಗಿರುವ ಶಾರದಾ ಪೂರ್‍ಯಾನಾಯ್ಕ ಅವರ ಹೆಸರು ಮತ್ತು ಭಾವಚಿತ್ರವನ್ನೇ ಕೈಬಿಟ್ಟಿರುವುದನ್ನು ಹಾಗೂ ಕರಪತ್ರದಲ್ಲಿನ ಗೊಂದಲ ಕುರಿತು ಯಾವುದೇ ಹೇಳಿಕೆ ನೀಡದಿರುವುದು ನೋಡಿದರೆ ಪಕ್ಷದ ವಕ್ತಾರರು ಕಾಣೆಯಾಗಿದ್ದಾರಾ ಎಂಬ ಅನುಮಾನ ಮೂಡುತ್ತಿದೆ.
ಪದೇ ಪದೇ ಈ ರೀತಿಯ ಗೊಂದಲಗಳ ಸೃಷ್ಠಿಕರ್ತರು ಯಾರು ಮತ್ತು ಇದರ ಹಿಂದೆ ಯಾವ ವ್ಯಕ್ತಿಯ ಕೈವಾಡ ಇದೆ ಎಂಬುದು ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ಅವರು ತಿಳಿಯಬೇಕಿದೆ. ಇಲ್ಲದಿದ್ದರೆ ಚುನಾವಣೆಯಲ್ಲಿ ಅವರ ಅರಿವೆಗೆ ಬರದೇ ಹಿನ್ನಡೆಯಾಗುವ ಸಾಧ್ಯತೆಗಳೂ ಅಲ್ಲಗಳೆಯುವಂತಿಲ್ಲ.
ರಾಜಕೀಯ ತಂತ್ರಗಾರಿಕೆಯೇ…?!
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್‍ಯಾನಾಯ್ಕ ಅವರು ತಮ್ಮ ಕ್ಷೇತ್ರದ ಪ್ರತಿ ಗ್ರಾಮ, ಹೋಬಳಿ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಾ, ಮೈತ್ರಿ ಅಭ್ಯರ್ಥಿ ಪರ ಮತ ಭೇಟೆಯಾಡುತ್ತಿದ್ದರೆ, ಇತ್ತ ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿ ಗೌಡ ಅವರು ಕೂಡ ಕ್ಷೇತ್ರದ ಗಲ್ಲಿಗಲ್ಲಿಯಲ್ಲಿ ಮೈತಿ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಿದ್ದಾರೆ ಹಾಗೂ ಬಿಜೆಪಿ-ಜೆಡಿಎಸ್ ಜಂಟಿ ಸಭೆಗಳಲ್ಲಿ ಸಕ್ರಿಯರಾಗಿದ್ದರಾರೆ. ಆದರೂ ಸಹ ಚುನಾವಣಾ ಕರಪತ್ರದಲ್ಲಿ ಅವರ ಕಡೆಗಣನೆ ಏಕೆಂಬುದು ಅಶ್ಚರ್ಯತಂದಿದೆಯಲ್ಲದೇ, ಮುಂದಿನ ದಿನಗಳಲ್ಲಿ ಈ ವಿಧಾನಸಭಾ ಕ್ಷೇತ್ರಗಳನ್ನು ತನ್ನ ಮಡಿಲಿಗೆ ಹಾಕಿಕೊಳ್ಳಲು ಬಿಜೆಪಿ ಈ ರೀತಿಯ ತಂತ್ರಗಾರಿಕೆ ಹೂಡಿದೆಯೇ ಎಂಬ ಅನುಮಾನ ಕಾರ್ಯಕರ್ತರಲ್ಲಿ ಕಾಡುತ್ತಿದೆ.