ಗುಡ್‌ಫ್ರೈಡೇ ಹಿಂದಿನ ದಿನ ಪವಿತ್ರ ಗುರುವಾರದ ಮಹತ್ವ …

ಪ್ರತಿ ಕ್ರೈಸ್ತ ಕುಟುಂಬದಲ್ಲಿ ಈ ಚಿತ್ರಪಟ ಕಾಣುವುದು ಸರ್ವೆ ಸಾಮಾನ್ಯ. ಒಂದು ಡೈನಿಂಗ್ ಟೇಬಲ್. ಅದರ ಮಧ್ಯದಲ್ಲಿ ದೇವಪುತ್ರ ಏಸುಕ್ರೀಸ್ತ, ಸುತ್ತಲೂ ಹನ್ನೆರಡು ಜನ ಶಿಷ್ಯರು. ಇದು ಏಸುವಿನ ಕೊನೆಯ ಭೋಜನದ ಪ್ರತೀಕ!
ಇನ್ನು ಕೆಲವೇ ತಾಸುಗಳಲ್ಲಿ ತಾನು ಶಿಲುಬೆಗೇರಿಸಲ್ಪಡುವೆ ನೆಂಬ ಸತ್ಯ ನಿಶ್ಚಿತವಾಗಿ ತಿಳಿದ ಏಸು, ತನ್ನ ಶಿಷ್ಯರೊಡಗೂಡಿ ತನ್ನ ಅಂತಿಮ ಭೋಜನವನ್ನು ಸ್ವೀಕರಿಸುತ್ತಾರೆ. ಇದು ಕೇವಲ ಲಾಸ್ಟ್ ಸಪ್ಪರ್ ಅಷ್ಟೇ ಆಗಿದ್ದರೆ ಇದಕ್ಕೆ ಅಂತಹ ಮಹತ್ವವಿರುತ್ತಿ ರಲಿಲ್ಲ. ಆದರೆ ಆ ದಿನ ರಾತ್ರಿ ಏಸು ಹೇಳಿದ ಮಾತುಗಳು, ಮಾಡಿದ ಕಾರ್ಯಗಳು ಮನುಕುಲಕ್ಕೆ ದಾರಿದೀಪ! ಇದನ್ನು ಇಂದಿಗೂ ವಿಶ್ವದ ಎಲ್ಲ ರೋಮನ್ ಕಥೋಲಿಕ್ ಚರ್ಚುಗಳಲ್ಲಿ ಪಾದ್ರಿಗಳು, ಬಿಷಪ್ ಮತ್ತು ಪರಮೋಚ್ಛ ಗುರು ಪೋಪ್ ಅವರೂ ಕೂಡ ಅನುಕರಿಸುತ್ತಾ ಬಂದಿzರೆ. ಹನ್ನೆರಡು ಜನರ ಪಾದಗಳನ್ನು ತೊಳೆಯುವ ಕ್ರಿಯೆ ಶ್ರದ್ಧಾಭಕ್ತಿಯಿಂದ ನೆರವೇರಿಸುತ್ತಾರೆ.
ಗುಡ್‌ಫ್ರೈಡೆಯ ಹಿಂದಿನ ದಿನವನ್ನು ಮಂಡಿ ಥರ್ಸ್‌ಡೇ ಅಥವಾ ಪವಿತ್ರ ಗುರುವಾರ ವೆಂದು ಕರೆಯುತ್ತಾರೆ. ಬೂದಿ ಬುಧವಾರದಿಂದ ಪ್ರಾರಂಭವಾದ ತಪಸ್ಸು ಮತ್ತು ಉಪವಾಸ ಪವಿತ್ರ ಗುರುವಾರದಂದು ಅಂತ್ಯಗೊಳ್ಳುತ್ತದೆ.
ಈ ವರ್ಷ ಏಪ್ರಿಲ್ ೬ ರಂದು ಆಚರಿಸಲ್ಪಡುವ ಈ ದಿನ ಕ್ರೈಸ್ತರು ತಮ್ಮ ಪಾಪಗಳನ್ನು ನಿವೇದನೆ ಮಾಡುತ್ತಾ ಕ್ಷಮೆಯಾಚಿಸುವರು. ಅಂತಿಮ ಭೋಜನ ಸಮಯದಲ್ಲಿ ಏಸುಕ್ರಿಸ್ತರು ಬ್ರೆಡ್ ಮತ್ತು ದ್ರಾಕ್ಷಾರಸವನ್ನು ಕೈಯಲ್ಲಿ ಹಿಡಿದು ಇದು ತನ್ನ ಶರೀರ ಮತ್ತು ರಕ್ತ ಇದನ್ನು ಭುಜಿಸಿ ಧನ್ಯರಾಗಿರಿ ಎಂದು ಸಾಂಕೇತಿಕವಾಗಿ ತನ್ನ ಬಲಿದಾನವನ್ನು ಶಿಷ್ಯರಿಗೆ ಸೂಚಿಸುತ್ತಾರೆ.
ಇಂದಿಗೂ ಕೂಡ ಚರ್ಚ್‌ಗಳಲ್ಲಿ ಕ್ರೈಸ್ತರು ಪೂಜಾ ಸಮಯದಲ್ಲಿ ದ್ರಾಕ್ಷಾರಸದಲ್ಲಿ ಅದ್ದಿದ ಗೋಧಿ ರೊಟ್ಟಿಯ ಬಿಯ ಮೂಲಕ ಯೇಸುವಿನ ಶರೀರವನ್ನು ತಮ್ಮಲ್ಲಿ ಆವಾಹಿಸಿಕೊಳ್ಳುತ್ತಿದ್ದೇವೆ ಎಂದು ಶ್ರದ್ಧಾ ಭಕ್ತಿಯಿಂದ ಸೇವಿಸುತ್ತಾರೆ.


ಭೋಜನ ಸ್ವೀಕರಿಸುವ ಮುನ್ನ ಏಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುತ್ತಾರೆ. ವಿನಯ, ವಿನೀತ, ವಿಧೇಯ ಮತ್ತು ಪರಸ್ಪರ ಪ್ರೀತಿ, ಸಮಾನತೆಯ ಭಾವ ಈ ಕ್ರಿಯೆಯಲ್ಲಿ ಅಡಗಿದೆ ಎಂಬ ಸಂದೇಶವನ್ನು ಯೇಸು ಅತ್ಯಂತ ಸರಳವಾಗಿ ನಿರೂಪಿಸಿzರೆ. ಬಡವ-ಬಲ್ಲಿದ, ಮೇಲು-ಕೀಳು ಎಂಬ ತಾರತಮ್ಯವಿಲ್ಲದೆ ಈ ಸಂಪ್ರದಾಯ ಇಂದಿಗೂ ಮುಂದುವರಿದಿದೆ.
ಏಸುವಿನ ಶಿಷ್ಯರನ್ನು ಆಪೋಸ್ತಲರೆಂದು ಕರೆಯುತ್ತಾರೆ. ಪೀಟರ್, ಆಂಡ್ರ್ಯೂ, ಜೇಮ್ಸ್, ಜನ್, ಫಿಲಿಪ್, ಮ್ಯಾಥ್ಯೂ, ಬಾರ್ತೊಲೋಮ್, ಥಾಮಸ್, ಜೇಮ್ಸ್, ಆಲ್ಪಾಯಿಸ್, ಥಡಾಯಿಸ್, ಸೈಮನ್ ಮತ್ತು ಜೂದಾಸ್ ಈ ಹನ್ನೆರಡು ಶಿಷ್ಯರಲ್ಲಿ ಜೂದಾಸನೆಂಬ ಶಿಷ್ಯ ಏಸುವಿಗೆ ವಂಚಿಸುತ್ತಾನೆ.
ರೋಮನ್ ಸೈನಿಕರು ಏಸುವನ್ನು ಬಂಧಿಸಲು ನೆರವಾಗುತ್ತಾನೆ. ತನ್ನ ಗುರುವಿಗೆ ಘಾತುಕರ ಕೈವಶ ಮಾಡಿದ ದ್ರೋಹದ ದುರಂತದ ದ್ಯೋತಕವಾಗಿ ಕ್ರೈಸ್ತರು ಈ ದಿನ ಚರ್ಚ್‌ಗಳಲ್ಲಿನ ಎಲ್ಲ ಅಲಂಕಾರಿಕ ವಸ್ತುಗಳನ್ನು ತೆಗೆಯುತ್ತಾರೆ ಅಥವಾ ಬಟ್ಟೆಯಿಂದ ಮುಚ್ಚಿ ತಮ್ಮ ಶೋಕ ವ್ಯಕ್ತಪಡಿಸುತ್ತಾರೆ.
ನಾನು ನಿಮ್ಮನ್ನು ಪ್ರೀತಿಸಿದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸಿರಿ ಎಂದು ಈ ದಿನ ಯೇಸು ಶಿಷ್ಯರಿಗೆ ಆeಪಿಸುತ್ತಾರೆ. ಆದರೂ ಜೂದಾಸ ದ್ರೋಹ ಬಗೆಯುತ್ತಾನೆ. ಮರಣಕಾಲ ಸಮೀಪಿಸುವಾಗ ಯಾವುದೇ ಐಹಿಕ ಸುಖ-ಭೋಗಗಳನ್ನು ಬಯಸಬಾರದು ಎಂಬ ಸಂಕೇತವೂ ಬಾಹ್ಯ ಅಲಂಕಾರ ತೊಡೆದು ಹಾಕುವುದರಲ್ಲಿದೆ.
ದೀನರಲ್ಲಿ ದೀನನಾಗು ಎಂಬ ಸಂದೇಶ ಪಾದಗಳನ್ನು ತೊಳೆಯುವುದರಲ್ಲಿದೆ. ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ವಾಣಿಯಂತೆ, ದಾಸನಾಗು ವಿಶೇಷನಾಗು ಎಂಬ ದಾಸರ ಉಕ್ತಿಯಂತೆ ಶರಣಾಗತಿಯ ಈ ಪವಿತ್ರ ಗುರುವಾರ ತ್ಯಾಗ-ಪ್ರೀತಿ ಭಾವೈಕ್ಯತೆ ಸಮಾನತೆಯ ಆಚರಣೆಯಾಗಿದೆ.
ಜಸ್ಟಿನ್ ಡಿಸೋಜ
ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ
ದಾವಣಗೆರೆ