ಬಿ.ವೈ. ರಾಘವೇಂದ್ರ ಜಗಮೆಚ್ಚಿದ ಮಗ: ಬೊಮ್ಮಾಯಿ…
ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ತಂದೆಗೆ ತಕ್ಕ ಮಗ, ಜಗಮೆಚ್ಚಿದ ಮಗ. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಂದಲೇ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಕೆರೆಗಳ ಅಭಿವೃದ್ದಿ, ಹೆದ್ದಾರಿಗಳ ನಿರ್ಮಾಣ, ಹೊಸ ರೈಲುಗಳು, ನೂತನ ವಿಮಾನ ನಿಲ್ದಾಣ ಸ್ಥಾಪನೆ ಹೀಗೆ ಹತ್ತು ಹಲವು ಅಭಿವೃದ್ದಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸಿಸಿದರು.
ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆ ನಂತರ ಟಿ.ಸೀನಪ್ಪಶೆಟ್ಟಿ ವೃತ್ತದ ಬಳಿ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿ ರೈತರಿಗಾಗಿ ಕೆಲಸ ಹಾಗೂ ಹೋರಾಟ ಮಾಡಿದ ಎರಡು ರಾಜಕೀಯ ಕುಟುಂಬ ಗಳಿವೆ. ಒಂದು ಯಡಿಯೂರಪ್ಪ ಕುಟುಂಬ, ಮತ್ತೊಂದು ದೇವೇಗೌಡರ ಕುಟುಂಬ. ಈ ಎರಡು ರೈತ ಶಕ್ತಿಗಳ ಮುಂದೆ ಬೇರ್‍ಯಾವ ಶಕ್ತಿಗಳು ನಿಲ್ಲಲು ಸಾಧ್ಯವಿಲ್ಲ ಎಂದರಲ್ಲದೇ, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ಮೋಸ ಹೋಗದಿರಿ, ದೇಶದ ಜನತೆಯನ್ನು ಕರೋನದಿಂದ ಉಳಿಸಲು ಲಸಿಕೆ ನೀಡಿದ, ಬಡವರಿಗೆ ಉಚಿತ ಅಕ್ಕಿ ಕೊಡುತ್ತಿರುವ, ರೈತರಿಗಾಗಿ ಪ್ರತಿ ವರ್ಷ ೬ ಸಾವಿರ ರೂ ನೀಡುತ್ತಿರುವ ಮೋದಿಯವರಿಗೆ ಮತ್ತೊಮ್ಮೆ ಪ್ರಧಾನಿಯಾಗಿಸಲು ಬಿಜೆಪಿಗೆ ಮತ ನೀಡಿ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಇಂದಿನ ಮೆರವಣಿಗೆಯಲ್ಲಿ ಸೇರಿರುವ ಜನರನ್ನು ನೋಡಿದರೆ ರಾಘವೇಂದ್ರ ಈ ಚುನಾವಣೆಯಲ್ಲಿ ೩ ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಮತ ಕೇಳಿ, ಹೆಚ್ಚಿನ ಮತಪಡೆದು ಮುಂದೆ ಯಾರೂ ಈ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ನಿಲ್ಲಲೂ ಯೋಚಿಸದಂತೆ ಮಾಡಿ ಎಂದರು.
ದೇಶದಲ್ಲಿ ಕಾಂಗ್ರೆಸ್‌ಗೆ ಪ್ರಧಾನಿ ಅಭ್ಯರ್ಥಿಯೇ ಇಲ್ಲವಾಗಿದೆ. ಮೋದಿ ಹಾಗೂ ದೇವೇಗೌಡರ ಮೈತ್ರಿಯಿಂದ ರಾಜ್ಯದಲ್ಲಿ ಶಕ್ತಿ ಹೆಚ್ಚಿದೆ. ನಾವು ಎಲ್ಲಾ ೨೮ ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಎಂಪಿಎಂ ಕಾರ್ಖಾನೆಗೆ ಕೊನೆ ಮೊಳೆ ಹೊಡೆದವರು ಕಾಂಗ್ರೆಸ್. ವಿಐಎಸ್‌ಎಲ್‌ಗೆ ಬೀಗ ಹಾಕುವ ಪರಿಸ್ಥಿತಿ ಬಂದಾಗ ಉಳಿಸಿದ್ದು ಯಡಿಯೂರಪ್ಪನವರು, ಎಸ್‌ಬಿಐಗೆ ಆಸ್ಥಿ ಮರ್ಜ್ ಆದಾಗ ಬಾಕಿ ಹಣ ಕಟ್ಟಿ ಆಸ್ಥಿ ಉಳಿಸಿಕೊಟ್ಟವರು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದವರು ಯಡಿಯೂರಪ್ಪ ಅವರಾಗಿದ್ದಾರೆ ಎಂದರು.