ಅಂದು ಅವಮಾನಿಸಿದ ಕಮಲ ಪಾಳೆಯಕ್ಕೀಗ ಮತ್ತೆ ಅರಿವಾಗುತ್ತಿದೆ ರಾಜಾಹುಲಿ ಯಡಿಯೂರಪ್ಪನವರ ಪವರ್…

BSY1

(ಹೊಸನಾವಿಕ ಪೊಲಿಟಿಕಲ್ ನ್ಯೂಸ್ ಡೆಸ್ಕ್)
ಶಿವಮೊಗ್ಗ: ರಾಜ್ಯ ಕಂಡ ಅತ್ಯಂತ ದುರಂತ ರಾಜಕಾರಣಿ ಎಂದರೆ ಅದು ಒನ್ ಅಂಡ ಓನ್ಲಿ ಮಿಸ್ಟರ್ ಯಡಿಯೂರಪ್ಪ ಎಂದರೆ ತಪ್ಪಾಗಲಾರದು. ಕಾರಣ ತಮ್ಮ ಜೀವಮಾನವಿಡೀ ಹೋರಾಟದ ಬದುಕು ನಡೆಸಿದ ಅವರು, ರಾಜಕೀಯ ಜೀವನದ ಕೊನೆಯ ಹಂತದಲ್ಲಿ ತಾವು ಕಂಡಿದ್ದ ಕನಸಿನ ಕುರ್ಚಿಯನ್ನು ಏರಿದ್ದರು ಮಾತ್ರವಲ್ಲ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಒಂದು ನೆಲೆಯನ್ನು ಕಟ್ಟಿಕೊಟ್ಟರು.
ಜೀವಮಾನವಿಡೀ ವಿಪಕ್ಷದಲ್ಲಿದ್ದು ಹೋರಾಟವನ್ನು ತಮ್ಮ ಬದುಕನ್ನಾಗಿಸಿಕೊಂಡಿದ್ದ ಬಿಎಸ್‌ವೈ ಅವರು ತಮಗೆ ದೊರೆತ ಅಧಿಕಾರವನ್ನು ಸಹ ಚಲಾಯಿಸಲು ಅಷ್ಟೇ ಸಾಹಸ ಪಡಬೇಕಾಗಿದ್ದು ಮಾತ್ರ ವಿಪರ್ಯಾಸದ ಸಂಗತಿ. ಪ್ರಥಮ ಬಾರಿಗೆ ಜೆಡಿಎಸ್‌ನೊಂದಿಗೆ ದೋಸ್ತಿ ಮಾಡಿ ಡಿಸಿಎಂ ಆದರೂ ನಂತರದ ಅವಧಿಗೆ ಅಧಿಕಾರ ಹಸ್ತಾಂತರಿಸುವಲ್ಲಿ ವಚನದ್ರೋಹ ಮಾಡಲಾಯಿತು. ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಛಲಗಾರ ಯಡಿಯೂರಪ್ಪ ನಂತರದ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಏರಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತೇ ಬಿಟ್ಟರು. ಆದರೆ ಇಲ್ಲೂ ಅವರಿಗೆ ಪೂರ್ಣಾವಧಿ ಅಧಿಕಾರ ನಡೆಸುವ ಸೌಭಾಗ್ಯ ದೊರೆಯಲಿಲ್ಲ. ಆ ಅವಧಿಯಲ್ಲಿ ಅನಿರೀಕ್ಷಿತವಾಗಿ ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರುಗಳು ಉಳಿದ ಅವಧಿಯಲ್ಲಿ ಸಿಂಹಾಸನವೇರಿದ್ದರು. ಮತ್ತೆ ಪುಟಿದೆದ್ದ ಬಿಎಸ್‌ವೈ ಕಳೆದ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಯ ಸಮೀಪಕ್ಕೆ ಬಂದು ಎಡವಿದ್ದರು. ನಂತರದ ದಿನಗಳಲ್ಲಿ ಜೆಡಿಎಸ್-ಕಾಂಗ್ರೆಸ್ ದೋಸ್ತಿಗೆ ರಾಜಕೀಯ ತಂತ್ರಗಾರಿಕೆ ಬಳಸಿ ಠಕ್ಕರ್ ಕೊಟ್ಟು ಛಲಬಿಡದೇ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ಬಿಟ್ಟರು.
ಆದರೆ ಈ ಅವಧಿ ಕೂಡ ಅವರಿಗೆ ನಿಶ್ಚಿಂತೆಯಿಂದ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ಒಂದೆಡೆ ನೆರೆ ಹಾವಳಿ ಮತ್ತೊಂದೆಡೆ ಕೋವಿಡ್ ಕಾಟ. ಇವೆಲ್ಲವನ್ನೂ ಮೆಟ್ಟಿನಿಂದ ಧೀಮಂತ ನಾಯಕನನ್ನು ಕಮಲ ಕಮಾಂಡ್ ವಯಸ್ಸಿನ ನೆಪವೊಡ್ಡಿ ಒತ್ತಡದ ತಂತ್ರ-ಕುತಂತ್ರಗಳಿಂದ ಅವರನ್ನು ಮತ್ತೆ ಅಧಿಕಾರದಿಂದ ವಿನಾಕಾರಣ ಕೆಳಗಿಳಿಸಿ ಅವರದೇ ಸಮುದಾಯದ ಬಸವರಾಜ ಬೊಮ್ಮಾಯಿ ಅವರನ್ನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಕುರ್ಚಿ ಮೇಲೆ ಪ್ರತಿಷ್ಠಾಪಿಸಲಾಯಿತು.
ಅಂದು ಅತ್ಯಂತ ದಕ್ಷತೆ- ಕ್ರಿಯಾಶೀಲತೆ ಯಿಂದ ಯುವಕರೂ ನಾಚುವಂತೆ ಹಗಲಿರುಳೆನ್ನದೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಬಿಎಸ್‌ವೈ ಅವರನ್ನು ಕೇವಲ ವಯಸ್ಸಿನ ನೆಪವೊಡ್ಡಿ ಒತ್ತಡದ ತಂತ್ರಗಾರಿಕೆಯಿಂದ ಸಿಎಂ ಕುರ್ಚಿಯಿಂದ ಒತ್ತಾಯಪೂರ್ವಕವಾಗಿ ಕೆಳಗಿಸಿದ್ದ ಕಮಲ ಪಾಳೆಯ ಈಗ ಮತ್ತದೇ ವಯಸ್ಸಾದ ಬಿಎಸ್‌ವೈ ಅವರ ಮಂತ್ರ ಜಪಿಸುತ್ತಿರುವುದು ಆಶ್ಚರ್ಯ ತಂದಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಿಗಿಟ್ಟು ನಿಕಟಪೂರ್ವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಂತ್ರ ಪಠಿಸಲು ಮುಂದಾಗಿದ್ದಾರೆ. ಇಂದು ಬಿಎಸ್‌ವೈ ಅವರ ಮಂತ್ರ ಪಠಿಸುತ್ತಿರುವ ಬಿಜೆಪಿ ಅಂದು ಕಣ್ಣೀರು ಹಾಕಿಸಿ ಯಡಿಯೂರಪ್ಪನವರ ಅಧಿಕಾರ ಕಿತ್ತುಕೊಂಡಿದ್ದೇಕೆ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಫೆ.೨೭ರಂದು ಯಡಿಯೂರಪ್ಪನವರ ಜನ್ಮದಿನದಂದೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪನವರ ಹೋರಾಟದ ಬದುಕು ಪ್ರತಿಯೊಬ್ಬರಿಗೂ ಪ್ರೇರಣೆ ಎಂದು ಹಾಡಿ ಹೊಗಳಿದರು.
ಆದರೆ ಇದೇ ಯಡಿಯೂರಪ್ಪನವರು ದಕ್ಷಿಣ ಭಾರತದಲ್ಲಿ ಬಿಜೆಪಿಯ ಕಮಲ ಅರಳಲು ಕಾರಣಕರ್ತರು ಎಂಬುದು ಮರೆತ ಬಿಜೆಪಿ ಹೈಕಮಾಡ ಬಿಎಸ್‌ವೈರನ್ನು ತೆರೆಮರೆಗೆ ಸರಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತ್ತು ಎಂಬುದು ಇತಿಹಾಸ.
ಇಂದಿಗೂ ಉತ್ತರ ಸಿಗದ ಪ್ರಶ್ನೆಗಳೆಂದರೆ, ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ಯಶಸ್ವಿಯಾಗಿ ಅಧಿಕಾರ ನಡೆಸುತ್ತಿದ್ದ ಬಿಎಸ್‌ವೈ ಅವರು ಇದ್ದಕ್ಕಿದ್ದಂತೆ ದೆಹಲಿಗೆ ಹೋಗಿ ಬಂದು ರಾಜೀನಾಮೆ ಕೊಟ್ಟಿದ್ದೇಕೆ?, ರಾಜೀನಾಮೆಗೆ ಮುನ್ನ ಕಣ್ಣೀರು ಹಾಕಿ ಗೋಳಾಡಿದ್ದೇಕೆ? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರವೇ ಸಿಕ್ಕಿಲ್ಲ. ಕರ್ನಾಟಕದಲ್ಲಿ ಬಿಎಸ್‌ವೈ ಬದಿಗಿಟ್ಟು ಫೀಲ್ಡಿಗಿಳಿದರೆ ಬಿಜೆಪಿಗೆ ನಾಲ್ಕು ಸೀಟುಗಳು ಸಿಗುವುದಿಲ್ಲ ಎಂಬ ವಾಸ್ತವ ಸಂಗತಿ ಅರಿವಾಗುತ್ತಲೇ ಯಡಿಯೂರಪ್ಪರನ್ನು ಉತ್ಸವ ಮೂರ್ತಿ ಮಾಡಲು ಹೊರಟಿರುವ ಇದೇ ನಾಯಕರು ಹಿಂದೆ ಅವರನ್ನು ಹೇಗೆಲ್ಲಾ ನಡೆಸಿಕೊಂಡಿತ್ತು ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಬೇಕಿದೆ. ಚುನಾವಣೆ ಮುಗಿಯುತ್ತಿದ್ದಂತೆಯೇ ಬಿಎಸ್‌ವೈ ಎಂಬ ಉತ್ಸವ ಮೂರ್ತಿಯನ್ನ ವಿಸರ್ಜನಾ ಮೂರ್ತಿ ಮಾಡುವ ಹುನ್ನಾರ ಅಡಗಿದೆಯೇ ಎಂಬುದು ಕಾದುನೋಡಬೇಕಿದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ತಂತ್ರಗಾರ ಬಿಜೆಪಿ ಚಾಣಕ್ಯ ಎಂದೇ ಕರೆಯಲ್ಪಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ ಬಿಜೆಪಿ ಸಮಾವೇಶಗಳಲ್ಲಿಯಾಗಲಿ ಅಥವಾ ರೋಡ್ ಶೋ, ರ್‍ಯಾಲಿಗಳಲ್ಲಾಗಲಿ ಸಿಎಂ ಬೊಮ್ಮಾಯಿ ಅವರ ಹೆಸರನ್ನೇ ಪ್ರಸ್ತಾಪ ಮಾಡುತ್ತಿಲ್ಲ. ಅಲ್ಲದೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಧೈರ್ಯದಿಂದ ಘೋಷಿಸುತ್ತಿಲ್ಲ.
ಅದೇ ರೀತಿ ಈ ಹಿಂದೆ ಬಿಎಸ್‌ವೈ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ನೆರೆ ಬಂದು ಜನ ತತ್ತರಿಸಿ ಸಹಾಯಕ್ಕಾಗಿ ಕೇಂದ್ರಕ್ಕೆ ಮೊರೆ ಇಟ್ಟು ಪ್ರಧಾನಿ ಭೇಟಿಗೆ ಅವಕಾಶ ಕೇಳಿದಾಗ ಪದೇ ಪದೇ ಅವರ ಮನವಿಯನ್ನು ನಿರಾಕರಿಸಲಾಗಿತ್ತು. ಈಗ ಚುನಾವಣೆ ಸಂದರ್ಭದಲ್ಲಿ ಅವರಿಗೆ ಯಡಿಯೂರಪ್ಪರ ಮೇಲೆ ಅತೀವ ಪ್ರೀತಿ ಮೂಡುತ್ತಿರುವುದೇಕೆ? ವಿಧಾನಸಭೆಯ ವಿದಾಯ ಭಾಷಣದ ನಂತರ ಬಿಎಸ್‌ವೈ ಮೇಲೆ ಅತಿಯಾದ ಪ್ರೀತಿ ಹುಟ್ಟಿದೆ ಎಂಬುದು ಮತ್ತೊಂದು ಆಶ್ಚರ್ಯಕರ ಸಂಗತಿ.
ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯ ಸ್ವಾಗತ ಭಾಷಣದಲ್ಲಿ ಪ್ರಧಾನಿಗಳನ್ನು ಹಾಡಿ ಹೊಗಳಿದ ರಾಜ್ಯದ ಸಿಎಂ ಪಕ್ಕದಲ್ಲೇ ಇದ್ದರೂ ಒಂದು ಬಾರಿಯೂ ಪ್ರಧಾನಿ ಬಾಯಲ್ಲಿ ಬೊಮ್ಮಾಯಿ ಹೆಸರು ಬರಲಿಲ್ಲ. ಇದು ಉದ್ದೇಶಪೂರ್ವಕ ನಿರ್ಲಕ್ಷ್ಯವೇ ಎಂಬ ಪ್ರಶ್ನೆ ಕಾಡತೊಡಗಿದೆ.
‘ಇದೇ ಬಿಎಸ್‌ವೈ ಅವರು ಸಿಎಂ ಆಗಿದ್ದಾಗ ಕರ್ನಾಟಕದ ನೆರೆ ಸಂಕಷ್ಟದ ಬಗ್ಗೆ ಹೇಳಿಕೊಳ್ಳಲು ಹಲವು ಬಾರಿ ಅಲೆದಾಡಿದರೂ ಪ್ರಧಾನಿ ಕಚೇರಿ ಒಳಗೂ ಬಿಟ್ಟುಕೊಳ್ಳಲಿಲ್ಲ. ಮೋದಿ ಬೆಂಗಳೂರಿಗೇ ಬಂದಿದ್ದರೂ ಅಂದು ಬಿಎಸ್‌ವೈ ಮುಖವನ್ನೂ ನೋಡದೆ ವಾಪಸ್ ತೆರಳಿದ್ದರು. ಈಗ ಚುನಾವಣೆ ಸಮೀಪಿಸಿರುವುದರಿಂದ ಗುಜರಾತ್ ಮಾದರಿ ವರ್ಕ್ ಔಟ್ ಆಗುವುದಿಲ್ಲ ಎಂಬುದನ್ನು ಅರಿತಿರುವ ಮೋದಿ ಅಂಡ್ ಟೀಮ್ ಅಂದು ಅವಮಾನಿಸಿದ್ದ ಯಡಿಯೂರಪ್ಪ ಅವರ ಜನ್ಮದಿನದಂದು ಶಿವಮೊಗ್ಗಕ್ಕೆ ಬಂದು ಬಿಎಸ್‌ವೈ ಸ್ತುತಿ ಮಾಡುತ್ತಿರುವ ಪ್ರಧಾನಿ ಮೋದಿ ಅಂಡ್ ಟೀಂಗೆ ರಾಜಾಹುಲಿಯ ಪವರ್ ಏನೆಂಬುದು ಅರ್ಥವಾಗಿದೇಯೇ ಎಂದು ಬಿಎಸ್‌ವೈ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಅಂದು ಸಿಡಿದೆದ್ದು ಕೆಜೆಪಿ ಪಕ್ಷ ಕಟ್ಟಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದ ಯಡಿಯೂರಪ್ಪ ಅವರು ಈಗ ಮತ್ತೊಮ್ಮೆ ತಮಗೆ ಅದೇ ನಾಯಕರು ಎಷ್ಟೆಲ್ಲಾ ಅವಮಾನಿಸಿದ್ದರೂ ಎಲ್ಲ ನೋವನ್ನು ಸಹಿಸಿಕೊಂಡಿರುವ ಬಿಎಸ್‌ವೈ ಅವರು ಒಮ್ಮೆಯೂ ಬಹಿರಂಗವಾಗಿ ಪಕ್ಷ ಮತ್ತು ಪಕ್ಷದ ನಾಯಕರನ್ನು ಟೀಕಿಸದೇ ತಮ್ಮ ಮುತ್ಸದ್ಧಿತನವನ್ನು ಮೆರೆದಿದ್ದಾರಲ್ಲದೇ, ತಮ್ಮ ಇಳಿ ವಯಸ್ಸಿನಲ್ಲಿಯೂ ಯುವಕರು ನಾಚುವಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮತ್ತೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ. ಈಗ ನೀವೇ ನಿರ್ಧರಿಸಿ ಬಿಜೆಪಿಯಲ್ಲಿ ನಿಜವಾದ ಮಾದರಿ ಜನಪ್ರತಿನಿಧಿ ಮತ್ತು ಜನನಾಯಕ ಯಾರೆಂದು….