ಬ್ರಹ್ಮರಥೋತ್ಸವ: ನೀತಿ ಸಂಹಿತೆ ನೆಪದಲ್ಲಿ ಪ್ರಸಾದ ವಿತರಣೆಗೆ ನಿರ್ಬಂಧ ಸಲ್ಲದು…
ಶಿಕಾರಿಪುರ: ಇತಿಹಾಸ ಪ್ರಸಿದ್ದ ಇಲ್ಲಿನ ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವದಲ್ಲಿ ನಾಡಿನ ಮೂಲೆಮೂಲೆಯಿಂದ ಸಹಸ್ರಾರು ಭಕ್ತರು ಧಾವಿಸಲಿದ್ದು, ಆಗಮಿಸುವ ಭಕ್ತರಿಗೆ ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಪ್ರಸಾದ ವಿತರಿಸಲು ತಾಲೂಕು ಆಡಳಿತ ನಿರ್ಭಂದಿಸಿದೆ. ಖಾಸಗಿ ಸಂಘ ಸಂಸ್ಥೆಗಳ ಪ್ರಸಾದ ವಿತರಣೆಗೆ ಅವಕಾಶ ನೀಡದೆ ಲಕ್ಷಾಂತರ ಆದಾಯ ಹೊಂದಿರುವ ದೇವಸ್ಥಾನದ ವತಿಯಿಂದ ಅಧಿಕಾರಿಗಳು ವಿತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೃಷ್ಣ ಹುಲಗಿ ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.
ಇದೇ ೬ರ ನಾಳೆ ಗುರುವಾರ ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀ ಹುಚ್ಚುರಾಯಸ್ವಾಮಿಯ ಬ್ರಹ್ಮರಥೋತ್ಸವವಿದ್ದು ನಾಡಿನ ಮೂಲೆಮೂಲೆಯಿಂದ ಧಾವಿಸುವ ಭಕ್ತರಿಗೆ ಪ್ರತಿ ವರ್ಷ ದೇವಸ್ಥಾನದಲ್ಲಿ ಅನ್ನ ಪ್ರಸಾದ ಜತೆಗೆ ನೀರು ಮಜ್ಜಿಗೆ ಪಾನಕ ಕೋಸಂಬರಿಯನ್ನು ವಿವಿಧ ಭಕ್ತರು ಸ್ವಯಂಪ್ರೇರಣೆಯಿಂದ ವಿತರಿಸುತ್ತಿದ್ದು, ಈ ಬಾರಿ ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಪ್ರಸಾದದ ಜತೆಗೆ ತಂಪು ಪಾನೀಯ ವಿತರಣೆಗೆ ಅಧಿಕಾರಿ ಗಳು ಅನುಮತಿ ನೀಡದೆ ರಥೋತ್ಸವವನ್ನು ಕೇವಲ ಶಾಸ್ತ್ರ ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಳಿಸುವ ಷಡ್ಯಂತ್ರ ರೂಪಿಸಿದ್ದಾರೆ. ಬೇಸಿಗೆ ಬಿಸಿಲು ಅತ್ಯಧಿಕವಾಗಿದ್ದು ಸಮೀಪದಲ್ಲಿ ಹೋಟೆಲ್‌ಗಳಿಲ್ಲ. ಕುಡಿಯಲು ನೀರು ಸಿಗುವುದು ಅಸಾಧ್ಯ. ಇದರಿಂದ ಭಕ್ತ ವರ್ಗದ ಕೆಂಗಣ್ಣಿಗೆ ಗುರಿಯಾಗುವುದು ನಿಶ್ಚಿತ ಎಂದು ತಿಳಿಸಿದರು.
ಮುಜರಾಯಿ ಇಲಾಖೆಯ ಸುಪರ್ದಿನ ದೇವಾಲಯಕ್ಕೆ ಮಾಸಿಕ ಲಕ್ಷಾಂತರ ಆದಾಯವಿದೆ. ಭಕ್ತರ ಕಾಣಿಕೆಯನ್ನು ಭಕ್ತರ ಹಿತಕ್ಕೆ ಸಮರ್ಪಿಸುವುದು ನ್ಯಾಯಯುತ ಕಾರ್ಯ. ಈ ದಿಸೆಯಲ್ಲಿ ಆನೂಚಾನವಾಗಿ ನಡೆದುಕೊಂಡು ಬಂದ ಅನ್ನಸಂತರ್ಪಣೆ ಸಂಪ್ರದಾಯಕ್ಕೆ ರಾಜಕಾರಣಿಗಳು ಸಂಸದ ಶಾಸಕರ ಸಹಿತ ಜನಪ್ರತಿನಿಧಿಗಳ ದೇಣಿಗೆ ಅಗತ್ಯವಿಲ್ಲ. ಭಕ್ತರು ಯಥೇಚ್ಚವಾಗಿ ನೀಡಲಿದ್ದಾರೆ. ಖುದ್ದು ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ಭಕ್ತರಿಗೆ ದಾಸೋಹ ಸಹಿತ ತಂಪು ಪಾನೀಯದ ವ್ಯವಸ್ಥೆ ಕಲ್ಪಿಸಬೇಕು ಅಸಾಧ್ಯವಾದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳಿಗೆ ವಹಿಸಿದಲ್ಲಿ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದಾಸೋಹ ಹಾಗೂ ಪಾನೀಯ ವಿತರಣೆಯ ಎಲ್ಲ ಜವಾಬ್ದಾರಿ ಯನ್ನು ವಹಿಸಿಕೊಳ್ಳಲಿದ್ದೇವೆ ಎಂದು ಭರವಸೆ ನೀಡಿದರು.
ಈ ಕೂಡಲೇ ಜಿಲ್ಲಾಡಳಿತ ತಾಲೂಕು ಆಡಳಿತ ಪ್ರಸಾದ ವ್ಯವಸ್ಥೆ ಬಗ್ಗೆ ತುರ್ತು ತೀರ್ಮಾನ ಕೈಗೊಳ್ಳಬೇಕು. ತಪ್ಪಿದಲ್ಲಿ ಭಕ್ತ ವರ್ಗದ ಶಾಪಕ್ಕೆ ಗುರಿಯಾಗುವುದು ನಿಶ್ಚಿತ ಎಂದು ಎಚ್ಚರಿಸಿದ ಅವರು ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಹುಚ್ಚುರಾಯಸ್ವಾಮಿಗೆ ಪೂಜೆ ವಿಧಿವಿಧಾನ ಮತ್ತಿತರ ಧಾರ್ಮಿಕ ಪದ್ದತಿ ಜತೆಗೆ ದಾಸೋಹಕ್ಕೆ ತೊಂದರೆಯಾದಲ್ಲಿ ಸಂಘಟನೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಸಂಘಟನೆ ನಗರಾಧ್ಯಕ್ಷ ಮಂಜುನಾಥ್, ಶಿವಯ್ಯ ಶಾಸ್ತ್ರಿ, ಮಾಲತೇಶ, ಇಮ್ರಾನ್, ಮುಕ್ರಮ್, ಯಮುನಪ್ಪ, ಯೋಗೀಶ್, ಉಮೇಶ್, ನಾಗರಾಜ್ ಮತ್ತಿತರರಿದ್ದರು.