ಮನುಷ್ಯತ್ವದಿಂದ ದೇವರಾದ ಸಿದ್ಧಗಂಗಾಶ್ರೀಗಳು…

MYSORE

ಮೈಸೂರು: ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಸಿದ್ಧ ಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳೆಂದು ಪತ್ರಕರ್ತ, ಸಾಹಿತಿ ಬನ್ನೂರು ಕೆ. ರಾಜು ಅವರು ಗುಣಗಾನ ಮಾಡಿದರು.
ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಸಿದ್ಧಗಂಗೆಯ ಸಿದ್ಧಿ ಪುರುಷ ಶ್ರೀ ಶಿವಕುಮಾರ ಸ್ವಾಮೀಜಿಗಳ ೧೧೭ನೇ ಜಯಂತಿ ಮತ್ತು ಶ್ರೀ ಸಿದ್ಧ ಗಂಗಾ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ನಡೆದಾಡುವ ದೇವರೆಂದೇ ನಾಡಿನಾದ್ಯಂತ ಹೆಸರಾಗಿ ತ್ರಿವಿಧ ದಾಸೋಹಕ್ಕೊಂದು ದೈವತ್ವ ತಂದು ಕೊಟ್ಟ ತ್ರಿವಿಧ ದಾಸೋಹ ಬ್ರಹ್ಮ ಸಿದ್ಧಗಂಗೆಯ ಸಿದ್ಧಿ ಪುರುಷ ಶ್ರೀ ಶಿವಕುಮಾರ ಸ್ವಾಮೀಜಿ ಗಳು ಬುದ್ಧ, ಬಸವ, ಯೇಸು, ಗಾಂಧಿ, ಅಂಬೇಡ್ಕರ್, ಪೈಗಂಬರ್, ಪ್ಲೇಟೋ, ಅರಿ ಸ್ಟಾಟಲ್ , ಮಹಾವೀರ, ಮದರ್ ತೆರೆಸಾ, ರಾಮಕೃಷ್ಣ ಪರಹಂಸ, ವಿವೇಕಾನಂದ ಮುಂತಾದ ಜಗತ್ತಿನ ನೂರಾರು ಚಿಂತಕರ,ದಾರ್ಶನಿಕರ, ಮಹಾತ್ಮರ, ಮಹನೀಯರ ತತ್ವಾದರ್ಶಗಳ ಒಟ್ಟು ಮೊತ್ತ ದಂತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಶ್ರೀಗಳ ಸ್ಮರಣಾರ್ಥ ವಿವಿಧ ಕ್ಷೇತ್ರಗಳ ಸಾಧಕರಾದ ಹೆಚ್. ವಿ. ಮುರಳೀಧರ್ (ಶಿಕ್ಷಣ), ರಾಮ ದಾಸ್ (ಸಾರ್ವಜನಿಕ ಸೇವೆ), ಟಿ.ಎಂ. ರವಿಕುಮಾರ್ (ಉದ್ಯಮಿ), ಉಮ್ಮತ್ತೂರು ಚಂದ್ರು (ಸಮಾಜ ಸೇವೆ), ಸುರೇಶ್ ಗೌಡ (ಕಲಾ ಕ್ಷೇತ್ರ), ರುಕ್ಮಿಣಿ (ಸಮಾಜ ಸೇವೆ) ಇವರುಗಳಿಗೆ ಪ್ರಸ್ತುತ ಸಾಲಿನ ಪ್ರತಿಷ್ಠಿತ ಶ್ರೀ ಸಿದ್ಧ ಗಂಗಾ ಸಿರಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕವಯಿತ್ರಿ ಡಾ.ಲೀಲಾ ಪ್ರಕಾಶ್ ಕಾರ್ಯ ಕ್ರಮ ಕುರಿತು ಮಾತನಾಡಿದರು.
ಚಿಂತಕ ಡಾ.ರಘು ರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ವಿ. ಎಂ. ಮಣಿಕಂಠ ಇನ್ನಿತರರು ಉಪಸ್ಥಿತರಿದ್ದರು.