ಯಾರು ಈ ವ್ಯಾಲೆಂಟೈನ್; ಆತನ ಹೆಸರಿನಲ್ಲಿ ಪ್ರತಿ ವರ್ಷ ಪ್ರೇಮಿಗಳ ದಿನ ಆಚರಣೆ ಮಾಡುವುದೇಕೆ?

valantain-1

ಪ್ರೇಮಿಗಳ ದಿನದ ಉಡುಗೊರೆಗಳಿಗಾಗಿ ಪ್ರಪಂಚದಾದ್ಯಂತ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಲಾಗುತ್ತದೆ ಎಂಬುದು ಸತ್ಯ ಸಂಗತಿಯಾಗಿದೆ. ಆದರೆ ಪ್ರೇಮಿಗಳ ದಿನದ ಹಿಂದಿನ ಕಥೆ ಏನು ಮತ್ತು ಪ್ರಪಂಚದಾದ್ಯಂತ ಅದನ್ನು ಹೇಗೆ ಆಚರಿಸಲಾಗುತ್ತದೆ. ಈ ದಿನವು ಪ್ರಪಂಚದಾದ್ಯಂತ ಹೇಗೆ ಹರಡಿತು, ಇದಕ್ಕೆ ಕಾರಣವೇನು? ಎಂಬ ಸತ್ಯವನ್ನು ಬೆನ್ನತ್ತಿಹೋದರೆ ನಮಗೆ ತಿಳಿಯುವುದು ಇದರ ವಾಣಿಜ್ಯ ಸ್ವರೂಪ. ಫೆಬ್ರವರಿ ೧೪ ರಂದು ಆಚರಿಸಲಾಗುವ ವ್ಯಾಲೆಂಟೈನ್ಸ್ ಡೇ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ವಾರ್ಷಿಕ ರಜಾ ದಿನವಾಗಿದೆ. ಈ ದಿನವನ್ನು ಸೇಂಟ್ ವ್ಯಾಲೆಂಟೈನ್ಸ್ ಡೇ ಅಥವಾ ಸೇಂಟ್ ವ್ಯಾಲೆಂಟೈನ್ಸ್ ಫೀಸ್ಟ್ ಎಂದೂ ಕರೆಯಲಾಗುತ್ತದೆ. ವ್ಯಾಲೆಂಟೈನ್ಸ್ ಡೇ ಮೂಲತಃ ಪಾಶ್ಚಿಮಾತ್ಯ ಸಮಾಜದಲ್ಲಿ ಆಚರಿಸಲಾಗುವ ಕ್ರಿಶ್ಚಿಯನ್ ಹಬ್ಬದ ದಿನವಾಗಿ ಪ್ರಾರಂಭವಾಯಿತು. ವ್ಯಾಲೆಂಟಿನಸ್ ಎಂಬ ಹೆಸರಿನ ಸಂತರನ್ನು ಗೌರವಿಸಲು ಈ ದಿನವನ್ನು ಮೀಸಲಿಡಲಾಗಿದೆ ಮತ್ತು ವಿಶ್ವದಲ್ಲಿ ಈ ಹೆಸರಿನಿಂದ ಕರೆಯಲ್ಪಡುವ ಅನೇಕ ಸಂತ ವ್ಯಾಲೆಂಟೈನ್ಸ್ ಇದ್ದರು. ಸೇಂಟ್ ವ್ಯಾಲೆಂಟೈನ್ ಅವರು ಪರಿಚಯಿಸಿದ್ದು ಜವಾಬ್ದಾರಿಯುತ ಕೌಟುಂಬಿಕ ಜೀವನದಲ್ಲಿ ಬರುವ ತಂದೆ-ತಾಯಿ ನಡುವಿನ ಪ್ರೀತಿ, ಸಹೋದರರ ನಡುವಿನ ಪ್ರೀತಿ, ಸ್ನೇಹಿತರ ನಡುವಿನ ಪ್ರೀತಿಯೇ ಹೊರತು ಯಾವುದೇ ರೀತಿಯ ಬಾಹ್ಯ ಆಕರ್ಷಣೆಯ ಪ್ರೀತಿ-ಪ್ರೇಮವಲ್ಲ ಎಂಬ ಸತ್ಯವನ್ನು ಅರಿಯಬೇಕಿದೆ.

ಬಹುತೇಕ ಎ ಪ್ರೇಮಿಗಳು ಎದುರು ನೋಡುತ್ತಿದ್ದ ದಿನ ಬಂದಿದೆ. ಫೆ.೧೪ರಂದು ಇಡೀ ವಿಶ್ವವೇ ಪ್ರತಿ ವರ್ಷ ಆಚರಿಸುವ ಹತ್ತು ಹಲವು ವಿಶೇಷ ದಿನಗಳಲ್ಲಿ ವ್ಯಾಲೆಂಟೈನ್ ಡೇ ಕೂಡಾ ಒಂದು. ವ್ಯಾಲೆಂಟೈನ್ ಡೇ ಕುರಿತು ಪರ-ವಿರೋಧ ಚರ್ಚೆಗಳ ನಡುವೆ, ಆಚರಣೆಯ ವಿರೋಧಾಭಾಸದ ನಡುವೆಯೂ ಪ್ರತಿ ವರ್ಷ ಪ್ರೇಮಿಗಳು ತಮ್ಮ ವಿಶೇಷ ದಿನವನ್ನು ಆಚರಿಸುತ್ತಾ ಬಂದಿzರೆ. ಫೆ. ೭ ರಿಂದ ವ್ಯಾಲೆಂಟೈನ್ ವೀಕ್ ಆರಂಭವಾಗಿ ಫೆ.೧೪ರಂದು ಕೊನೆಗೊಳ್ಳುತ್ತದೆ.
ವ್ಯಾಲೆಂಟೈನ್ ವೀಕ್ ಆರಂಭದಿಂದ ಪ್ರೇಮಿಗಳು ತಮ್ಮ ಸಂಗಾತಿಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುತ್ತಾರೆ. ಅದೇ ರೀತಿ ತಮ್ಮ ಪ್ರೀತಿ ಪಾತ್ರರಿಗೆ ಮೆಚ್ಚಿನ ಉಡುಗೊರೆ ನೀಡುವ ಮೂಲಕ ಅವರನ್ನು ಇಂಪ್ರೆಸ್ ಮಾಡಲು ಮುಂದಾಗುತ್ತಾರೆ. ಆದರೆ ಪ್ರೇಮಿಗಳ ದಿನ ಆಚರಿಸುವುದು ಏಕೆ..? ವ್ಯಾಲೆಂಟೈನ್ ಡೇ ಎಂದರೇನು..? ಈ ವ್ಯಾಲೆಂಟೈನ್ ಎಂದರೆ ಯಾರು..? ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ನಾವುಗಳು ಆಚರಿಸುವ ಪ್ರತಿಯೊಂದು ಆಚರಣೆಗಳಿಗೆ ಒಂದೊಂದು ಹಿನ್ನೆಲೆ ಇದ್ದೇ ಇರುತ್ತದೆ. ಹಾಗೇ ಈ ಪ್ರೇಮಿಗಳ ದಿನ ಸೆಲಬ್ರೇಷನ್‌ಗೆ ಕೂಡ ಒಂದು ಮಹತ್ವ ಇದೆ.
ದಿ ಸ್ಟೋರಿ ಆಫ್ ಸೇಂಟ್ ವ್ಯಾಲೆಂಟೈನ್:
ರೋಮ್ ನಗರಕ್ಕೆ ಸೇರಿದ ಓರ್ವ ಪಾದ್ರಿಯ ಹೆಸರೇ ವ್ಯಾಲೆಂಟೈನ್. ಸುಮಾರು ೩ನೇ ಶತಮಾನದಲ್ಲಿ ಅಂದರೆ ಕ್ರಿ.ಶ. ೨೬೦ ಸಮಯದಲ್ಲಿ ರೋಮ್ ಚಕ್ರವರ್ತಿ ಕ್ಲಾಡಿಯಸ್ ಎಂಬಾತನು ತನ್ನ ಆಳ್ವಿಕೆಯಲ್ಲಿ ಪ್ರೇಮ ಹಾಗೂ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಒಂದು ಕಟ್ಟು ನಿಟ್ಟಿನ ನಿರ್ಬಂಧ ವಿಧಿಸಿರುತ್ತಾನೆ. ಅಂತೆಯೇ ಸೈನಿಕರು ಮದುವೆ ಆಗಬಾರದು ಎಂಬ ನಿಯಮವನ್ನು ಕೂಡಾ ವಿಧಿಸುತ್ತಾನೆ. ಒಂದು ವೇಳೆ ಆತ ಜಾರಿಗೆ ತಂದ ನಿಯಮ ಮೀರಿ ನಡೆದರೆ ಅಂತಹವರನ್ನು ಕ್ರೂರವಾಗಿ ಶಿಕ್ಷಿಸುತ್ತಿದ್ದನು. ಆತನ ಪ್ರಕಾರ ಪ್ರೀತಿ, ಪ್ರೇಮ, ಮದುವೆ ಎಂಬ ಸಂಬಂಧದಲ್ಲಿ ಇರುವವರು ಸಮಯ ವ್ಯರ್ಥ ಮಾಡುತ್ತಾರೆ ಹಾಗೂ ತಮ್ಮ ಪ್ರೀತಿ ಪಾತ್ರರನ್ನು ಬಿಟ್ಟು ಸೈನ್ಯಕ್ಕೆ ಸೇರುವುದಿಲ್ಲ ಎಂಬ ಉದ್ದೇಶದಿಂದ ಚಕ್ರವರ್ತಿ ಕ್ಲಾಡಿಯಸ್ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದನು ಎನ್ನಲಾಗಿದೆ.
ಆದರೆ ಇದಕ್ಕೆ ವಿರುದ್ಧವಾಗಿ ಪಾದ್ರಿ ವ್ಯಾಲೆಂಟೈನ್ ಎಂಬುವವರು, ಪ್ರೇಮಿಗಳಿಗೆ ಹಾಗೂ ಮದುವೆಯಾಗಿ ಕುಟುಂಬ ಜೀವನ ನಡೆಸಬೇಕೆಂಬ ಕನಸನ್ನೊತ್ತು ಬಂದ ಸೈನಿಕರಿಗೆ ಮುಂದೆ ನಿಂತು ಮದುವೆ ಮಾಡಿಸಿ ಕೌಂಟುಂಬಿಕ ಜೀವನ ನಡೆಸಲು ಸಹಕರಿಸುತ್ತಿದ್ದರು. ಪಾದ್ರಿ ವ್ಯಾಲೆಂಟೈನ್ ಮಾಡುತ್ತಿರುವ ಈ ಕೆಲಸ ರೋಮ್ ಚಕ್ರವರ್ತಿಯ ಗಮನಕ್ಕೆ ಬಂದು, ಪಾದ್ರಿ ವ್ಯಾಲೆಂಟೈನ್‌ರನ್ನು ಬಂಧಿಸಿ ಅರಮನೆಯ ಕಾರಾಗೃಹದಲ್ಲಿ ಇರಿಸಿ ಮರಣ ದಂಡನೆಗೆ ಆದೇಶಿಸುತ್ತಾನೆ.
ಸೇಂಟ್ ವ್ಯಾಲೆಂಟೈನ್ ಅವರು ರೋಮನ್ ಪಾದ್ರಿ ಆಗಿದ್ದರು ಮತ್ತು ಮದುವೆಯಾಗಲು ನಿಷೇಧಿಸಲ್ಪಟ್ಟ ಸೈನಿಕರಿಗೆ ವಿವಾಹ ಸಂಸ್ಕಾರಗಳನ್ನು ನೀಡಿದ್ದಕ್ಕಾಗಿ ಅವರನ್ನು ಜೈಲಿನಲ್ಲಿರಿಸಲಾಗಿತ್ತು. ಆ ಸಮಯದಲ್ಲಿ ರೋಮನ್ ಸಾಮ್ರಾಜ್ಯದ ಅಡಿಯಲ್ಲಿ ಕಿರುಕುಳಕ್ಕೊಳಗಾದ ಕ್ರಿಶ್ಚಿಯನ್ನರಿಗೆ ಇವರು ಸೇವೆ ಸಲ್ಲಿಸುತ್ತಿzರೆ ಎಂಬ ಆರೋಪ ಕೂಡ ಇವರ ಮೇಲಿತ್ತು.
ಸೇಂಟ್ ವ್ಯಾಲೆಂಟೈನ್ ಅವರ ಮೇಲೆ ಹೊರಿಸಲಾದ ಅಪರಾಧಗಳ ಬಗ್ಗೆ ಆಗಿನ ರೋಮ್ ಚಕ್ರವರ್ತಿ ಕ್ಲೌಡಿಯಸ್‌ನಿಂದ ವಿಚಾರಣೆಗೆ ಒಳಗಾದರು ಎಂದು ಹೇಳಲಾಗುತ್ತದೆ. ಕ್ಲೌಡಿಯಸ್ ಚಕ್ರವರ್ತಿಯು ಕ್ರೈಸ್ತ ಪಾದ್ರಿ ವ್ಯಾಲೆಂಟೈನ್ ಅವರನ್ನು ಪೇಗನಿಸಂಗೆ ಪರಿವರ್ತಿಸಲು ಪ್ರಯತ್ನಿಸಿದನು, ಆದರೆ ಸೇಂಟ್ ವ್ಯಾಲೆಂಟೈನ್ ಅವರು ಕ್ರಿಶ್ಚಿಯನ್ ಧರ್ಮವನ್ನು ಖಂಡಿಸಲು ನಿರಾಕರಿಸಿದರು ಎಂಬ ಕಾರಣಕ್ಕಾಗಿ ಕ್ಲೌಡಿಯಸ್ ಚಕ್ರವರ್ತಿ ವ್ಯಾಲೆಂಟೈನ್‌ರಿಗೆ ಮರಣದಂಡನೆ ಶಿಕ್ಷೆ ವಿಧಿಸುತ್ತಾನೆ.
ವ್ಯಾಲೆಂಟೈನ್ ಅವರು ಜೈಲಿನಲ್ಲಿzಗ (ಮರಣದಂಡನೆಗೆ ಮುಂಚಿತವಾಗಿ), ಜೈಲರ್ ಆಸ್ಟೀರಿಯಸ್‌ನ ಕುರುಡು ಮಗಳನ್ನು ಗುಣಪಡಿಸಿದನೆಂದು ಹೇಳಲಾಗುತ್ತದೆ. ಅವನ ಮರಣದಂಡನೆಯ ಹಿಂದಿನ ದಿನ ಸಂಜೆ ಅಂದರೆ ಕ್ರಿ.ಶ. ೨೬೯ರ ಫೆಬ್ರವರಿ ೧೪, ಪಾದ್ರಿ ವ್ಯಾಲೆಂಟೈನ್ ಅವರು ಆಸ್ಟೀರಿಯಸ್‌ನ ಮಗಳಿಗೆ ವಿದಾಯ ಪತ್ರವನ್ನು ಬರೆದು ‘ಯುವರ್ ವ್ಯಾಲೆಂಟೈನ್’ ಎಂದು ಸಹಿ ಹಾಕಿದನು. ಕಾರಾಗೃಹದ ಅಧಿಕಾರಿಗಳು ಪಾದ್ರಿ ವ್ಯಾಲೆಂಟೈನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ಅವರ ದೇಹವನ್ನು ಸಮಾಧಿ ಮಾಡುತ್ತಾರೆ ಎಂಬುದು ಇತಿಹಾಸದಿಂದ ತಿಳಿಯಬಹುದಾಗಿದೆ.
ಸೇಂಟ್ ವ್ಯಾಲೆಂಟೈನ್ ಮರಣಹೊಂದಿದಾಗ, ಆಸ್ಟರಿಯಸ್‌ನ ಪುತ್ರಿ ಜೂಲಿಯಾ ಅವನ ಸಮಾಧಿಯ ಬಳಿ ಒಂದು ಬಾದಾಮಿ ಗಿಡವನ್ನು ನೆಟ್ಟಳು. ಅಂದಿನಿಂದ ಬಾದಾಮಿ ಮರವು ಪ್ರೀತಿ ಮತ್ತು ಸ್ನೇಹದ ಸಂಕೇತವಾಗಿದೆ. ಬಾದಾಮಿ ಮರವು ಗುಲಾಬಿ ಬಣ್ಣದ ಹೂವುಗಳನ್ನು ಹೊಂದಿರುವುದರಿಂದ ಇದು ಪ್ರೀತಿಯ ಸಂಕೇತವಾಗಿದೆ.
ಅಂತೆಯೇ ಅನೇಕ ಕ್ರಿಶ್ಚಿಯನ್ ಹುತಾತ್ಮರನ್ನು ಕೂಡ ವ್ಯಾಲೆಂಟೈನ್ ಎಂದು ಹೆಸರಿಸಲಾಗಿದೆ. ಈ ಕಾರಣಕ್ಕಾಗಿ ಸೇಂಟ್ ವ್ಯಾಲೆಂಟೈನ್ಸ್ ಡೇ ಪ್ರಪಂಚದಾದ್ಯಂತ ಅನೇಕ ಕ್ರಿಶ್ಚಿಯನ್ ಪಂಗಡಗಳ ಅಧಿಕೃತ ಆಚರಣೆಯಾಗಿದೆ. ಇದನ್ನು ಆಂಗ್ಲಿಕನ್, ಲುಥೆರನ್ ಮತ್ತು ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚ್‌ಗಳಲ್ಲಿ ಆಚರಿಸಲಾಗುತ್ತದೆ. ಆದಾಗ್ಯೂ, ಇದನ್ನು ಯಾವಾಗಲೂ ಫೆ.೧೪ ರಂದು ಆಚರಿಸಲಾಗುವುದಿಲ್ಲ. ದಂತಕಥೆಯ ಪ್ರಕಾರ, ಸೇಂಟ್ ವ್ಯಾಲೆಂಟೈನ್ ಅವರು ಪ್ರೀತಿಯ ವಾಗ್ದಾನವನ್ನು ಸೂಚಿಸಲು ಚರ್ಮದಿಂದ ಮಾಡಿದ ಹೃದಯದ ಆಕಾರದ ತುಂಡುಗಳನ್ನು ನೀಡುವುದು ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇಗೆ ಸಂಬಂಧಿಸಿದಂತೆ ನೀಡುವ ಪ್ರೀತಿಯ ಹೃದಯದ ಆಕಾರದ ಬಳಕೆಯನ್ನು ಇದು ಬಹುಶಃ ವಿವರಿಸುತ್ತದೆ.
೧೪ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ವ್ಯಾಲೆಂಟೈನ್ಸ್ ಡೇ ಪ್ರಣಯ-ಪ್ರೀತಿಯ ಕಲ್ಪನೆಯೊಂದಿಗೆ ಸಂಬಂಧ ಹೊಂದಲು ಪ್ರಾರಂಭಿಸಿತು. ಈ ಸಮಯದಲ್ಲಿ ಇದು ಜನಪ್ರಿಯವಾಯಿತು.
೧೮ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪರಸ್ಪರ ಪ್ರೇಮಿಗಳು ಹೂವುಗಳು, ಮಿಠಾಯಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಮತ್ತು ‘ವ್ಯಾಲೆಂಟೈನ್ಸ್’ ಎಂದು ಕರೆಯಲ್ಪಡುವ ಶುಭಾಶಯ ಪತ್ರಗಳನ್ನು ಕಳುಹಿಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಪ್ರಾರಂಭಿಸಿದರು.
ಅಂದಿನಿಂದ ವ್ಯಾಲೆಂಟೈನ್ಸ್ ಕಳುಹಿಸುವ ಸಂಪ್ರದಾಯವು ಮುಂದುವರೆಯಿತು ಮತ್ತು ೧೯ನೇ ಶತಮಾನದ ಹೊತ್ತಿಗೆ, ಇಂಗ್ಲೆಂಡ್‌ನಲ್ಲಿ ಪ್ರತಿ ವರ್ಷ ಹತ್ತು ಸಾವಿರ ಪ್ರೇಮ ಪತ್ರಗಳು ರವಾನೆಯಾಗುತ್ತಿದ್ದವು ಎನ್ನಲಾಗಿದೆ.
ಈ ಪತ್ರಗಳ ಜನಪ್ರಿಯತೆ ಹೆಚ್ಚಾದಂತೆ, ಕಾಗದದ ವ್ಯಾಲೆಂಟೈನ್‌ಗಳನ್ನು ಅಂತಿಮವಾಗಿ ಕಾರ್ಖಾನೆಗಳಲ್ಲಿ ಮಹಿಳೆಯರಿಂದ ತಯಾರಿಸಲಾಯಿತು. ೧೮೪೦ರಲ್ಲಿ ಪೆನ್ನಿ ಬ್ಲಾಕ್ ಅಂಚೆ ಚೀಟಿಯ ಆವಿಷ್ಕಾರದಿಂದಾಗಿ ಅಂಚೆ ವೆಚ್ಚ ಕಡಿಮೆಯಾಯಿತು. ಅದೇ ವರ್ಷ ೪,೦೦,೦೦೦ ವ್ಯಾಲೆಂಟೈನ್‌ಗಳನ್ನು ಕಳುಹಿಸಲಾಗಿದೆ ಎನ್ನಲಾಗಿದೆ.
ವಾಣಿಜ್ಯೀಕರಣವಾಗಿ ಮಾರ್ಪಾಟಾದ
ವ್ಯಾಲೆಂಟೈನ್ ಡೇ:
ದಿನಕಳೆದಂತೆ ವಿಶೇಷವಾಗಿ ಇ-ಕಾರ್ಡ್‌ಗಳು, ಕೂಪನ್‌ಗಳು ಮತ್ತು ಮುದ್ರಿಸಬಹುದಾದ ಶುಭಾಶಯ ಪತ್ರಗಳ ಆವಿಷ್ಕಾರ ಮತ್ತು ಬೆಳವಣಿಗೆಯೊಂದಿಗೆ ವ್ಯಾಲೆಂಟೈನ್ಸ್ ಡೇ ವಾಣಿಜ್ಯೀಕೃತ ವಾಗಿ ಮಾರ್ಪಟ್ಟಿದೆ.
೨೦೧೦ರಲ್ಲಿ ಅಂದಾಜು ೧೫ ಮಿಲಿಯನ್ ಅಮೆರಿಕನ್ ಡಾಲರ್ ವ್ಯಾಲೆಂಟೈನ್‌ಗಳನ್ನು ಕಳುಹಿಸಲಾಗಿದೆ. ೨೦೧೫ರವರೆಗೂ ಯುಕೆಯಲ್ಲಿ ಸುಮಾರು ೧.೯ ಶತಕೋಟಿ (ಅಂದಾಜು) ಕಾರ್ಡ್‌ಗಳು, ಹೂಗಳು, ಚಾಕೊಲೇಟ್‌ಗಳು ಮತ್ತು ಇತರ ಉಡುಗೊರೆಗಳಿಗಾಗಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ.
ಜಪಾನ್‌ನಲ್ಲಿ ಸಂಪ್ರದಾಯದ ಪ್ರಕಾರ, ಪ್ರೇಮಿಗಳ ದಿನದಂದು ಮಹಿಳೆಯರು ತಮ್ಮ ಪುರುಷ ಸಹೋದ್ಯೋಗಿಗಳಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ ಮತ್ತು ಪುರುಷರು ಮಾ.೧೪ ರಂದು (ಶ್ವೇತ ದಿನ) ಪರವಾಗಿ ಪರಸ್ಪರ ಅದನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ದಕ್ಷಿಣ ಕೊರಿಯಾದ ಸಂಪ್ರದಾಯದ ಪ್ರಕಾರ ಮಹಿಳೆಯರು ಪ್ರೇಮಿಗಳ ದಿನದಂದು ಪುರುಷರಿಗೆ ಚಾಕೊಲೇಟ್ ನೀಡುತ್ತಾರೆ, ಮಾ.೧೪ರ ಶ್ವೇತ ದಿನದಂದು ಪುರುಷರು ಮಹಿಳೆಯರಿಗೆ ಚಾಕೊಲೇಟ್ ಅಲ್ಲದ ಕ್ಯಾಂಡಿಯನ್ನು ನೀಡುತ್ತಾರೆ. ಅಂತೆಯೇ ವ್ಯಾಲೆಂಟೈನ್ಸ್ ಡೇ ಅಥವಾ ವೈಟ್ ಡೇನಲ್ಲಿ ಉಡುಗೊರೆ ಸ್ವೀಕರಿಸದವರು ಏ.೧೪ ರಂದು ಏಕೈಕ ಕಪ್ಪು ನೂಡಲ್ಸ್‌ನ ಬೌಲ್‌ನೊಂದಿಗೆ ತಮ್ಮ ಸ್ಪಷ್ಟತೆಯನ್ನು ಸ್ಮರಿಸುತ್ತಾರೆ.
ಒಟ್ಟಿನಲ್ಲಿ ಹಿನ್ನೆಲೆ ಏನೇ ಇರಲಿ, ಪವಿತ್ರ ಪ್ರೀತಿಯ ಸಂಕೇತವಾಗಿ ಪ್ರೇಮಿಗಳಿಗಾಗಿ ಒಂದು ವಿಶೇಷ ದಿನ ಮೀಸಲಿಡ ಲಾಗಿದೆ. ಉಡುಗೊರೆ, ಆಡಂಬರ ಇಲ್ಲಿ ಮುಖ್ಯವಲ್ಲ. ತಮ್ಮ ಜವಾಬ್ದಾರಿಯನ್ನು ಅರಿತು, ಒಬ್ಬರ ಪ್ರೀತಿಯನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು, ಪರಸ್ಪರ ಕಷ್ಟ-ಸುಖಗಳಲ್ಲಿ ಜೊತೆಗಿದ್ದರೆ ಪ್ರತಿಯೊಬ್ಬರಿಗೂ ಫೆ.೧೪ ಮಾತ್ರವಲ್ಲ, ಪ್ರತಿ ದಿನವೂ.. ಪ್ರತಿಕ್ಷಣವೂ.. ವ್ಯಾಲೆಂಟೈನ್ಸ್ ಡೇ ಅಲ್ಲವೇ.