ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೇಕ್ಷಕರ ಗಮನ ಸೆಳೆದ ಕವಿಗೋಷ್ಠಿ…

KAVI-GOSTI-2

ಶಿವಮೊಗ್ಗ: ಜಿ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಿದ್ದ ಕವಿ ಗೋಷ್ಠಿ ಪ್ರೇಕ್ಷಕರ ಗಮನಸೆಳೆಯಿತು.
ಸುಮಾರು ೨೦ಕ್ಕೂ ಕವಿಗಳು, ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ಪ್ರಕೃತಿ, ಶ್ರೀರಾಮ, ಕನ್ನಡ ಭಾಷೆ, ಅಂಬೇಡ್ಕರ್, ಸೀತೆ, ಹಿಮಾಲಯ, ಭಾಷೆ, ಕೋಗಿಲೆ, ಆಕ್ರೋಶ, ಸುನಾಮಿ ಹೀಗೆ ಹಲವು ವಿಷಯಗಳನ್ನಿಟ್ಟುಕೊಂಡು ಕವಿಗಳು ಮತ್ತು ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿದರು.
ಬಹಳಷ್ಟು ಕವನಗಳು ಗಟ್ಟಿ ಇಲ್ಲದೇ ಸೊರಗಿದ್ದೂ ಕೂಡ ಕಂಡು ಬಂದಿತು. ಭಾಷೆ ಮಾಗದೇ ಮೇಲ್ನೋಟಕ್ಕೆ ಅವಸರವಾಗಿ ಬರೆದ ಕವಿತೆಗಳು ಇದ್ದವು. ಡಾ.ಕೆ.ಜಿ. ವೆಂಕಟೇಶ್ ಹಾಗೂ ಡಾ. ಹಸೀನಾ ಅವರ ಅಪ್ಪ ಕವಿತೆಗಳು ಗಮನಸೆಳೆದವು. ಬದುಕು ಕಟ್ಟಿಕೊಟ್ಟ ಕೂಲಿ ಇಲ್ಲದೇ ಅಪ್ಪ ಹೊರಟು ಬಿಟ್ಟ ಎಂಬ ಗಟ್ಟಿಯಾದ ಸಾಲುಗಳು ಇದ್ದವು. ವಾಣಿ ಸಾಗರ ಅವರ ಜಪಾನ್ ಸುನಾಮಿ, ಅನಿತಾ ಅವರ ತೀರದ ಬಯಕೆ, ನಾಗರತ್ನ ಅವರ ಸಮಾನತೆ ದಿಕ್ಕೆಟ್ಟಿದೆ ಎಂಬ ಕವಿತೆಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ನಾಗರತ್ನ ಅವರ ಜತಿ ಪತ್ರ ಪಡೆಯಲು ಜತ್ರೆಗಳೇ ನಡೆಯು ತ್ತಿವೆ ಎಂಬ ಸಾಲು ವಾಸ್ತವತೆಗೆ ಹಿಡಿದ ಕನ್ನಡಿಯಾಗಿತ್ತು. ಪ್ರವೀಣ್ ಕಾರಣಗಿರಿ ಅವರ ಆಕ್ರೋಶ ಕವನದಲ್ಲಿ ಆಕ್ರೋಶ ಎಂಬುದು ಜಗತ್ತನ್ನೇ ಆಳುತ್ತಿದೆ ಎಂಬ ಸಾಲು, ಸುಮಿತ್ರಾ ಅವರ ಬದಲಾಗಿದೆ ಲೋಕ ನಾ ಏನು ಹೇಳಬೇಕಾ ಎಂಬ ಸಾಲು, ಭಾರತಿ ಅವರ ದ.ರಾ. ಬೇಂದ್ರೆ ಕುರಿತ ಕವಿತೆ, ಸುಲೋಚನಾ ಅವರ ಕನ್ನಡದ ಬಗ್ಗೆ ಬರೆದ ಪದ್ಯಗಳು ಗಮನಸೆಳೆದವು. ಇನ್ನುಳಿದಂತೆ ಅನಿತಾ ಪರಮೇಶ್ವರ್, ಶಿಕ್ಷಕಿ ಶೋಭಾ, ನಾಗರತ್ನ, ಹಾಲಪ್ಪ, ಭಾಗೀರಥಿ, ಬಸವನಗೌಡ, ಡಾ. ಗಂಗಾಧರ, ಭಾರತಿ, ಅನಿತಾ ಕೃಷ್ಣ, ಸುಲೋಚನಾ ಮುಂತಾದವರು ಕವಿತೆಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಗಣೇಶಮೂರ್ತಿ ಪದ್ಯಗಳೆಲ್ಲವೂ ಚೆನ್ನಾಗಿದ್ದರೂ ಭಾಷೆ ಮಾಗಬೇಕು. ಧ್ಯಾನಿಸಿ ಬರೆಯ ಬೇಕು. ವಾಸ್ತವಕ್ಕೆ ಹತ್ತಿರವಿರಬೇಕು. ಅನುಭವದ ಮೂಲಕ ಕವಿತೆ ಹೊರ ಬರಬೇಕು ಎಂದರು.
ಸಮ್ಮೇಳನಾಧ್ಯಕ್ಷ ಪದ್ಮ ಪ್ರಸಾದ್ ಮಾತನಾಡಿ, ಕವಿತೆ ಎಂಬುದು ಒಳಗಿನ ಒತ್ತಡದಿಂದ ಹೊರ ಬರಬೇಕು. ಅನುಭವದಿಂದ ಅಭಿವ್ಯಕ್ತಗೊಳ್ಳಬೇಕು. ಕವಿತೆ ಕಟ್ಟುವುದು ಕೂಡ ಶ್ರಮದ ಕೆಲಸ ಎಂದರು.
ನಾಗಭೂಷಣ್ ನಿರೂಪಿಸಿ ದರು. ಕೆ.ಎಸ್. ಹುಚ್ರಾಯಪ್ಪ ಸ್ವಾಗತಿಸಿದರು. ಮಂಜುನಾಥ್ ಕಾಮತ್ ವಂದಿಸಿದರು.