advocate

ಚಿಕ್ಕಮಗಳೂರು: ಹೆಲ್ಮೆಟ್ ಹಾಕದೆ ಬೈಕ್ ಚಲಾಯಿಸುತ್ತಿದ್ದ ವಕೀಲರೋರ್ವರ ಮೇಲೆ ಪೋಲಿಸರು ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ ಚಿಕ್ಕಮಗಳೂರಿನಲ್ಲಿ ವಕೀಲರು ರಾತ್ರೋರಾತ್ರಿ ಭಾರಿ ಪ್ರತಿಭಟನೆ ನಡೆಸಿದರೆ, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ನ್ಯಾಯವಾದಿಗಳು ಬೀದಿಗಿಳಿದು ಆಕ್ರೋಶ ಹೊರಹಾಕಿದ ಹಿನ್ನಲೆಯಲ್ಲಿ ಪಿಎಸ್‌ಐ ಸೇರಿದಂತೆ ೬ ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.


ವಕೀಲ ಪ್ರೀತಂ ಅವರು ನಿನ್ನೆ ರಾತ್ರಿ ಹೆಲ್ಮೆಟ್ ಇಲ್ಲದೆ ಮಾರ್ಕೆಟ್ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಠಾಣೆಯ ಎದುರು ಅಡ್ಡಗಟ್ಟಿದ ಪೊಲೀಸರು, ಅವರ ಬೈಕ್‌ನಿಂದ ಕೀ ಕಸಿದುಕೊಂಡಿ ದ್ದಾರೆ. ಹೆಲ್ಮೆಟ್ ಹಾಕದಿರುವುದಕ್ಕೆ ದಂಡ ಕಟ್ಟುತ್ತೇನೆ, ಕೀ ಕಸಿದು ಕೊಳ್ಳಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರೀತಂ ಪ್ರಶ್ನಿಸಿದ್ದಾರೆ. ಅಲ್ಲದೇ ಅದನ್ನು ವಿಡಿಯೊ ಮಾಡಿಕೊಂಡಿದ್ದಾರೆ.
ಬಳಿಕ ಪೊಲೀಸರು ಪ್ರೀತಂ ಅವರನ್ನು ಠಾಣೆಯ ಒಳಗೆ ಕರೆದೊಯ್ದಿದ್ದಾರೆ. ಕಂಪ್ಯೂಟರ್ ಕೊಠಡಿಯಲ್ಲಿ ಕೂಡಿ ಹಾಕಿ ಮನ ಬಂದಂತೆ ದೊಣ್ಣೆ, ಲಾಠಿ, ಪೈಪ್‌ನಿಂದ ಹಲ್ಲೆ ನಡೆಸಿದರು. ಕಾಲಿನಿಂದಲೂ ತುಳಿದರು ಎಂದು ಪ್ರೀತಂ ದೂರಿದರು.
ಅಷ್ಟರಲ್ಲಿ ವಿಷಯ ತಿಳಿದು ಹಲವು ವಕೀಲರು ಠಾಣೆಯ ಎದುರು ಜಮಾಯಿಸಿದರು. ಬಳಿಕ ಪ್ರೀತಂ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಅವರ ಎದೆ, ಕೈ ಮತ್ತು ಬೆನ್ನಿಗೆ ಸಾಕಷ್ಟು ಗಾಯ ಗಳಾಗಿದ್ದು, ಇದು ವಕೀಲ ಸಮೂಹವನ್ನು ಇನ್ನಷ್ಟು ಕೆರಳುವಂತೆ ಮಾಡಿತು.
ರಾತ್ರಿಯಿಡಿ ಠಾಣೆಯ ಎದುರು ಧರಣಿ ನಡೆಸಿ, ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಪೊಲೀಸ್ ಹಿರಿಯ ಅಧಿಕಾರಿಗಳು ವಕೀಲರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಠಾಣೆಯ ಸಬ್ ಇನ್‌ಸ್ಪೆಕ್ಟರ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಸೇರಿ ಆರು ಪೊಲೀಸರ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸಲಾಗಿದೆ. ಅಷ್ಟೂ ಜನರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ಇಡೀ ಪ್ರಕರಣದ ಸಂಬಂಧ ತನಿಖೆ ನಡೆಸಿ ವರದಿ ನೀಡಲು ಡಿವೈಎಸ್‌ಪಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಬೀದಿಗಿಳಿದು ಬಿಗಿಪಟ್ಟು ಹಿಡಿದ ವಕೀಲರು; ಬೆಂಡಾದ ಎಸ್‌ಪಿ-ಡಿಸಿ : ಚಿಕ್ಕಮಗಳೂರಿ ನಲ್ಲಿ ವಕೀಲರ ಮೇಲೆ ನಡೆದ ಹಲ್ಲೆ ಖಂಡಿಸಿ ಶಿವಮೊಗ್ಗ ವಕೀಲರ ಸಂಘದ ನೇತೃತ್ವದಲ್ಲಿ ನೂರಾರು ವಕೀಲರು ಕಲಾಪದಿಂದ ಹೊರ ಗುಳಿದು ಬೃಹತ್ ಪ್ರತಿಭಟನೆ ನಡೆಸಿದರು.
ಕೋರ್ಟ್ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಾಲರಾಜ ಅರಸ್ ರಸ್ತೆ ಮೂಲಕ ಸೀನಪ್ಪ ಶೆಟ್ಟಿ ವೃತ್ತ, ಅಮೀರ್ ಅಹ್ಮದ್ ವೃತದವರೆಗೆ ಹೋಗಿ ವಾಪಸ್ ಶೀನಪ್ಪ ಶೆಟ್ಟಿ ವೃತ್ತಕ್ಕೆ ಬಂದು ಮಾನವ ಸರಪಳಿ ರಚಿಸಿ ಸುಮಾರು ೩ಗಂಟೆಗಳ ಕಾಲ ಪ್ರತಿಭಟನಾ ಸಭೆ ನಡೆಸಿದರು.
ವಕೀಲರ ಪ್ರತಿಭಟನೆ ಹಿನ್ನಲೆ ಯಲ್ಲಿ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಲಾಗಿತ್ತು.


ಶೀನಪ್ಪ ಶೆಟ್ಟಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರು, ತಮ್ಮ ಮನವಿ ಸ್ವೀಕರಿ ಸಲು ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳೇ ಬರಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ತಹಶೀಲ್ದಾರ್, ಡಿವೈಎಸ್ಪಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಂದರೂ ಕೂಡ ಅದನ್ನು ಒಪ್ಪದೇ ಜಿಲ್ಲಾಧಿಕಾರಿಗಳೇ ಬರಬೇಕು ಎಂದು ಪ್ರತಿಭಟ ನಾಕಾರರು ಪಟ್ಟು ಹಿಡಿದರು. ಈ ಮಧ್ಯೆ ವಕೀಲರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿ ದ್ದಂತೆಯೇ ಜಿಲ್ಲಾ ರಕ್ಷಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ವಕೀಲರು ಪ್ರತಿಭಟನೆ ಹಿಂಪಡೆದರು.
ಕ್ರಮಕ್ಕೆ ಆಗ್ರಹ: ಚಿಕ್ಕಮಗಳೂರಿನಲ್ಲಿ ನಿನ್ನೆ ವಕೀಲರ ಸಂಘದ ಸದಸ್ಯ ಪ್ರೀತಂ ಅವರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅಲ್ಲಿನ ನಗರದ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿ ಪ್ರೀತಂ ಅವರನ್ನು ಠಾಣೆಗೆ ಎಳೆದುಕೊಂಡು ಹೋಗಿ ಲಾಠಿ, ದೊಣ್ಣೆಯಿಂದ ಥಳಿಸಿ, ಶೂ ಕಾಲಿನಿಂದ ಹಲ್ಲೆ ನಡೆಸಿದ್ದಾರೆ. ಇದು ಮಾರಣಾಂತಿಕ ಹಲ್ಲೆಯಾಗಿದೆ. ಕೊಲೆ ಪ್ರಕರಣ ವನ್ನು ಪೊಲೀಸರ ಮೇಲೆ ದಾಖಲಿ ಸಬೇಕು. ಹಾಗೂ ಅವರನ್ನು ಸೇವೆಯಿಂದ ವಜಗೊಳಿಸಬೇಕು. ಅಮಾನತು ಮಾಡಿದರೆ ಸಾಲದು ತಕ್ಷಣ ಅವರನ್ನು ಬಂಧಿಸಬೇಕು ಎಂದು ವಕೀಲರು ಆಗ್ರಹಿಸಿದರು.
ಹೀಗೆ ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ. ವಕೀಲರ ರಕ್ಷಣಾ ಕಾಯ್ದೆಯನ್ನು ಸರ್ಕಾರ ತಕ್ಷಣ ಜರಿಗೊಳಿಸಬೇಕು. ಮತ್ತು ವಕೀಲರ ಮೇಲೆ ಹಲ್ಲೆ ನಡೆಯ ದಂತೆ ತಡೆಯುವ ಸಂಬಂಧ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ಶಿವ ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಉಪಾಧ್ಯಕ್ಷ ಟಿ.ಎಸ್. ಟೇಕೋಜಿರಾವ್, ಪ್ರಮುಖರಾದ ಕೆ.ಪಿ. ಶ್ರೀಪಾಲ್, ಗಿರೀಶ್ ಎಸ್., ಮಹೇಂದ್ರ ಕುಮಾರ್, ಮಂಜು, ವೈ.ಬಿ. ಚಂದ್ರಕಾಂತ್, ಅಶೋಕ್, ವಿದ್ಯಾರಾಣಿ ಸೇರಿದಂತೆ ನೂರಾರು ಹಿರಿಯ-ಕಿರಿಯ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಆಕ್ರೋಶ ಹೊರಹಾಕಿದರು.