ಸಾರ್ಥಕ ಸೇವೆಯಲ್ಲಿ ಮುನ್ನಡೆಯುತ್ತಿರುವ ಶಿಕಾರಿಪುರ ಪರೋಪಕಾರಂ ಕುಟುಂಬ…
ಸಮಾಜ ಸೇವೆ ಕೆಲವರಿಗೆ ಶೋಕಿ. ಸ್ವ ಹಿತಾಸಕ್ತಿ, ಪ್ರತಿಫಲಾಪೇಕ್ಷೆ, ಪ್ರಚಾರದ ಹಂಬಲ, ಸಮಾಜದ ಬಗ್ಗೆ ತಮಗೂ ಕಾಳಜಿ ಇದೆ ಎಂಬ ತೋರ್ಪಡಿಕೆಯ ಕಳಕಳಿ, ಟೈಂ ಪಾಸ್, ಜನರ ಸಂಪರ್ಕ ಮತ್ತಿತರೆ ಕಾರಣಗಳಿಂದ ಸಂಘ-ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವವರೂ ಇzರೆ. ಆದರೆ ಪ್ರಚಾರ ಬಯಸದೆ, ಯಾರಿಂದಲೂ ದೇಣಿಗೆ ಸಂಗ್ರಹಿಸದೆ, ಯಾವುದೇ ನಿರೀಕ್ಷೆ ಇಲ್ಲದೆ ಕಾಳಜಿ, ಕಳಕಳಿಯಿಂದ ಸೇವೆ ಸಲ್ಲಿಸುವ ಸಾಮಾಜಿಕ ಸೇವಾ ಸಂಸ್ಥೆಗಳು ಬಹಳ ಕಡಿಮೆ. ಇಂತಹವುಗಳಲ್ಲಿ ಶಿಕಾರಿಪುರದ ಪರೋಪಕಾರಂ ಕುಟುಂಬ ಸಹ ಒಂದು.
ಅಸಲಿಗೆ ಪರೋಪಕಾರಂ ಒಂದು ಕುಟುಂಬವೇ ಹೊರತು ಸಂಸ್ಥೆಯಲ್ಲ. ಇಲ್ಲಿ ಅಧ್ಯಕ್ಷರಾದಿಯಾಗಿ ಯಾವುದೇ ಪದಾಧಿಕಾರಿಗಳಿಲ್ಲ. ಅಧಿಕಾರದ ಹಂಬಲವೂ ಇಲ್ಲ. ಸಮಾನ ಮನಸ್ಕರು ಸದುದ್ದೇಶದಿಂದ ಒಂದೆಡೆ ಸೇರಿ ಸ್ವಚ್ಛತೆ, ಹಸರೀಕರಣ ಸೇರಿದಂತೆ ಸ್ವಚ್ಛ ಸುಂದರ ಶಿಕಾರಿಪುರಕ್ಕಾಗಿ, ಪರಸ್ಪರ ಸಹಕಾರಕ್ಕಾಗಿ ಎಂಬ ಧ್ಯೇಯದೊಂದಿಗೆ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಕುಟುಂಬ.
ಸಂಸದ ಬಿ.ವೈ. ರಾಘವೇಂದ್ರ ರಿಂದ ಹಿಡಿದು ಶ್ರೀಸಾಮಾನ್ಯರವರೆಗೆ ವಿವಿಧ ರಾಜಕಾರಣಿಗಳು, ಅಧಿಕಾರಿ ಗಳು, ಬ್ಯುಸಿನೆಸ್‌ಮೆನ್‌ಗಳು, ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು… ಹೀಗೆ ಜತಿ, ಧರ್ಮ, ಲಿಂಗ, ವಯೋಮಾನದ ಬೇಧವಿಲ್ಲದೆ ಎ ಸ್ತರದ ಜನರು ಈ ಕುಟುಂಬದಲ್ಲಿ ಗುರುತಿಸಿ ಕೊಂಡಿzರೆ.
ತಂಡದ ಹಿನ್ನೆಲೆ: ಶಿಕಾರಿಪುರದ ತಂಡಕ್ಕೆ ಮೂಲ ಪ್ರೇರಣೆ ಶಿವಮೊಗ್ಗದ ಪರೋಪಕಾರಂ. ಉಕ್ಕಿನ ಮನುಷ್ಯನಂತಹ ದಿಟ್ಟ ವ್ಯಕ್ತಿತ್ವದ ಸಮರ್ಥ ಸಂಘಟಕ ಶ್ರೀಧರ್ ಎನ್.ಎಂ. ಅವರ ಕಾರ್ಯವೈಖರಿ ಇವರಿಗೆ ಪ್ರೇರೇಪಣೆ ನೀಡುತ್ತಾ ಬರುತ್ತಿದೆ. ಇವರಂತೆ ನಮ್ಮ ಊರಿನಲ್ಲೂ ಇಂತಹ ಕುಟುಂಬ ರಚಿಸಿಕೊಂಡು ಸಾಮಾಜಿಕ ಸೇವೆ ಮಾಡಬೇಕೆಂಬ ಪ್ರೇರಣೆ ಹಾಗೂ ಸಂಕಲ್ಪದಿಂದ ೨೦೧೮ರ ಜುಲೈನಲ್ಲಿ ಶಿಕಾರಿಪುರದ ಪರೋಪಕಾರಂ ಕುಟುಂಬ ಆರಂಭವಾಯಿತು.
ಜವಳಿ ಉದ್ಯಮಿ ಲಕ್ಷ್ಮಣ್ ಕೆ.ಹೆಚ್., ರಿಯಲ್ ಎಸ್ಟೇಟ್ ಉದ್ದಿಮೆದಾರ ಮಧುಕೇಶವ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಕಾಶ್ ಕೆ.ಎಸ್. ಮತ್ತು ಕೃಷಿ ಇಲಾಖೆಯ ರಾಜಪ್ಪ ಪ್ರಾರಂಭದಲ್ಲಿ ಇದಕ್ಕೆ ಭದ್ರ ಬುನಾದಿ ಹಾಕಿದರು.
ನಂತರದ ದಿನಗಳಲ್ಲಿ ನಾನಾ ಸ್ತರದ ಜನರು ಇದಕ್ಕೆ ಕೈಜೋಡಿಸಿದರು. ಇದರ ಪರಿಣಾಮವಾಗಿ ಈ ಕುಟುಂಬ ಶಿಕಾರಿಪುರದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ೬.೩೦ರಿಂದ ೯ ಗಂಟೆವರೆಗೆ ಸ್ವಚ್ಛತೆ, ಶ್ರಮದಾನ, ಪರಿಸರ ಸಂರಕ್ಷಣೆ, ಜನಜಗೃತಿ ಮತ್ತಿತರೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಹೊನ್ನಾಳಿ ರಸ್ತೆಯಲ್ಲಿರುವ ಸ್ಮಶಾನ ಸ್ವಚ್ಛತೆ, ತಾಯಿಗೆ ನಮನ ಸಲ್ಲಿಸುವ ‘ಅಮ್ಮ’, ಪೌರ ಕಾರ್ಮಿಕರಿಗೆ ಬ್ಯಾಗ್ ಹಾಗೂ ಉಡುಪುಗಳ ವಿತರಣೆ, ಉಳ್ಳವರು ಇಲ್ಲದವರಿಗೆ ನೀಡುವ ಮಾಧ್ಯಮವಾಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಪರೋಪಕಾರಂ ವಾಲ್, ತಂಡದ ಸದಸ್ಯರೆ ಪ್ರವಾಸ ನಡೆಸುವ ‘ಪುನಶ್ಚೇತನ ಪರಿಮಳ’ ಮತ್ತಿತರೆ ಕಾರ್ಯಕ್ರಮಗಳು ಈ ತಂಡದ ವಿಶೇಷತೆ.
ದೇಶದ ಐಕ್ಯತೆ, ಭಾವೈಕ್ಯತೆಯನ್ನು ಸಾರುವ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಅಲ್ಲದೆ ಪರೋಪಕಾರಂ ಕುಟುಂಬದ ಸದಸ್ಯರು ಮಾರ್ಚ್‌ಫಾಸ್ಟ್‌ನಲ್ಲೂ ಪಾಲ್ಗೊಳ್ಳುತ್ತಾರೆ. ದೇಶಭಕ್ತಿಯನ್ನು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡು ಭಾರತಾಂಬೆಗೆ ನಮಿಸುತ್ತಾರೆ.
ಹಸರೀಕರಣದ ಹೆಸರಿನಲ್ಲಿ ಹಲವರು ಸಸಿಯನ್ನೇನೋ ನೆಡುತ್ತಾರೆ. ಆದರೆ ಅದರ ಪಾಲನೆ, ಪೋಷಣೆ ಮಾಡುವುದಿಲ್ಲ. ಇದರಿಂದಾಗಿ ಸಸಿಗಳು ಸತ್ತು ಹಸಿರೀಕರಣದ ಉದ್ದೇಶವೇ ನಿರರ್ಥಕವಾಗುತ್ತದೆ. ಇದನ್ನು ತಪ್ಪಿಸಲು ಪರೋಪಕಾರಂ ಕುಟುಂಬದ ಸದಸ್ಯರು ಕೇವಲ ಸಸಿ ನೆಡುವುದಷ್ಟೇ ಅಲ್ಲ ಅದರ ಪಾಲನೆ, ಪೋಷಣೆಯ ಜವಾಬ್ದಾರಿಯನ್ನೂ ಹೊತ್ತಿzರೆ. ಈ ಕುಟುಂಬವು ಈವರೆಗೆ ಒಂದೂವರೆ ಸಾವಿರದಷ್ಟು ಸಸಿಗಳನ್ನು ನೆಟ್ಟಿದ್ದು ಇದರಲ್ಲಿ ೮೦೦ಕ್ಕೂ ಅಧಿಕ ಸಸಿಗಳು ಬದುಕುಳಿದಿದ್ದು ಮರವಾಗಿ ಬೆಳೆಯುತ್ತಿವೆ.
ಕೋವಿಡ್-೧೯ನ ಲಾಕ್ ಡೌನ್ ಸಂದರ್ಭದಲ್ಲಿ ಪರೋಪಕಾರಂ ಕುಟುಂಬ ಜೀವದ ಹಂಗು ತೊರೆದು ಸಲ್ಲಿಸಿದ ಸೇವೆ, ಫುಡ್ ಕಿಟ್ ಹಂಚಿಕೆ, ಜನ ಜಗೃತಿ ಕಾರ್ಯ ಅವಿಸ್ಮರಣೀಯ.
ಈ ಕುಟುಂಬದ ಸೇವಾ ಮನೋಭಾವ ಗುರುತಿಸಿ ಶಿಕಾರಿಪುರದ ಅಂದಿನ ತಹಸೀಲ್ದಾರ್ ಕವಿರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ್ ಮತ್ತಿತರೆ ಅಧಿಕಾರಿ ಗಳು, ರಾಜಕಾರಣಿಗಳು, ಸೇವಾ ಕಾರ್ಯಕರ್ತರು ಇಂದಿಗೂ ಇವರನ್ನು ಪ್ರೋತ್ಸಾಹಿಸುತ್ತಾ ಬರುತ್ತಿzರೆ. ಈ ಕುಟುಂಬ ೨೦೦ನೇ ಕಾರ್ಯಕ್ರಮ ಪೂರೈಸಿದ್ದು, ಇದರ ಸಂಭ್ರಮಾಚರಣೆ ಇತ್ತೀಚಿಗೆ ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ನಡೆಯಿತು.
ಪ್ರಖ್ಯಾತ ಸರ್ಜಿ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ, ಸರ್ಜಿ ಫೌಂಡೇಷನ್ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡಾ| ಧನಂಜಯ ಸರ್ಜಿ ಶಿವಮೊಗ್ಗ ಪರೋಪಕಾರಂ ಕುಟುಂಬದ ಸದಸ್ಯರು.
ಇವರು ಶಿಕಾರಿಪುರ ಪರೋಪಕಾರಂನ ೨೦೦ನೇ ಕಾರ್ಯಕ್ರಮದಲ್ಲಿ ನಡೆದ ಆಶಾ ಕಾರ್ಯಕರ್ತೆ, ಮಾಜಿ ಸೈನಿಕ, ಪೌರ ಕಾರ್ಮಿಕ, ಅಂಗನವಾಡಿ ಕಾರ್ಯಕರ್ತೆ ಸೇರಿದಂತೆ ವಿವಿಧ ಸೇವಾಕರ್ತರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಪ್ರೋತ್ಸಾಹ ಹಾಗೂ ಪ್ರೇರಣಾದಾಯಕವಾಗಿ ಮಾತನಾಡಿ ಹುಮ್ಮಸ್ಸು ಹೆಚ್ಚಿಸಿದರು.
ಡಾ|| ಧನಂಜಯ ಸರ್ಜಿ, ಶಿವಮೊಗ್ಗದ ಪರೋಪಕಾರಂ ಶ್ರೀಧರ್ ಎನ್.ಎಂ. ಅಂತಹವರ ಸರಳತೆ, ಸೇವಾ ಬದ್ಧತೆಯನ್ನೇ ಆದರ್ಶವನ್ನಾಗಿಸಿಕೊಂಡಿರುವ ಶಿಕಾರಿಪುರದ ಪರೋಪಕಾರಂ ಕುಟುಂಬ ಸಾಮಾಜಿಕ ಸೇವೆ ಎಂಬ ಕ್ರೀಡಾಂಗಣದಲ್ಲಿ ಡಬ್ಬಲ್ ಸೆಂಚುರಿ ಹೊಡೆದು ನಾಟೌಟ್ ಆಗಿದ್ದು, ಈ ಕುಟುಂಬ ಹೀಗೆಯೇ ಭರ್ಜರಿ ಬ್ಯಾಂಟಿಂಗ್ ನಡೆಸಿ ಮಹತ್ವದ ಮೈಲಿಗಲ್ಲು ನಿರ್ಮಿಸಲಿ ಎಂಬುವುದೇ ನಮ್ಮೆಲ್ಲರ ಆಶಯ ಹಾಗೂ ಅಪೇಕ್ಷೆಯಾಗಿದೆ. ಇಂತಹ ಸತ್ಕಾರ್ಯಕ್ಕೆ ಜನತೆ ಕೈಜೋಡಿಸಿ ಶಿಕಾರಿಪುರವನ್ನು ರಾಜ್ಯ ಹಾಗೂ ದೇಶದ ಅತ್ಯುತ್ತಮ ನಗರವನ್ನಾಗಿಸಬೇಕಿದೆ.
ಲೇಖಕಿ: ಸುಧಾ ಜೋಯಿಸ್,
ಉಪನ್ಯಾಸಕಿ, ಸರ್ಕಾರಿ ಪಿಯು ಕಾಲೇಜು,
ಶಿಕಾರಿಪುರ. ೯೯೦೨೯೪೧೫೫೧