ಪರಿಸರಾಸಕ್ತರಿಂದ ತಲೆ ಮೇಲೆ ಕೈ ಹೊತ್ತು ವಿನೂತನ ಪ್ರತಿಭಟನೆ

ಶಿವಮೊಗ್ಗ: ನಗರದ ತಾಪಮಾನ ನಿಯಂತ್ರಣ, ಮುಂದಿನ ಪೀಳಿಗೆಗೆ ಮಾಲಿನ್ಯ ಮುಕ್ತ ವಾತಾವರಣ ನಿರ್ಮಾಣ ಕ್ಕಾಗಿ ಆಕ್ಸಿಜನ್ ಸಿಲಿಂಡರ್ ಎಂದೇ ಗುರುತಿಸಲ್ಪಟ್ಟಿರುವ ಇಲ್ಲಿನ ಹೊರವಲಯದ ರಾಗಿಗುಡ್ಡದಲ್ಲಿ ನವುಲೆ ಕಡೆಯಿಂದ ಕಾಂಕ್ರಿಟ್ ರಸ್ತೆ ನಿರ್ಮಾಣ ಸೇರಿದಂತೆ ಯಾವುದೇ ಕಟ್ಟಡ ನಿರ್ಮಾಣ ಕಾಮಗಾರಿ ಯನ್ನು ನಡೆಸಬಾರದು ಎಂದು ರಾಗಿಗುಡ್ಡ ಉಳಿಸಿ ಅಭಿಯಾನದ ನವ್ಯಶ್ರೀ ನಾಗೇಶ್ ಜಿಡಳಿತವನ್ನು ಒತ್ತಾಯಿಸಿದರು.
ರಾಗಿಗುಡ್ಡ ಉಳಿಸಿ ಅಭಿಯಾನದ ವತಿಯಿಂದ ಏ.೧ರ ಇಂದು ಶನಿವಾರ ಬೆಳಿಗ್ಗೆ ೮ ಗಂಟೆಗೆ ರಾಗಿಗುಡ್ಡದ ನೆತ್ತಿಯ ಮೇಲಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಮೂರ್ತಿಯ ಸಮೀಪ ರಾಗಿಗುಡ್ಡ ಉಳಿಸಿ ಎಂಬ ಧ್ಯೇಯದೊಂದಿಗೆ ತಲೆಯ ಮೇಲೆ ಕೈ ಹೊತ್ತು ವಿನೂತನವಾಗಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಈ ಪ್ರದೇಶದಲ್ಲಿ ಕಟ್ಟಡ, ಕಾಂಕ್ರಿಟ್ ರಸ್ತೆ ನಿರ್ಮಾಣದಿಂದ ನೈಸರ್ಗಿಕ ಕಾಡು ನಾಶವಾಗುತ್ತಿದೆ. ಗಿಡ, ಮರಗಳು ಅಗ್ನಿಗೆ ಆಹುತಿ ಯಾಗಿವೆ. ಅಳಿದುಳಿದಿರುವ ಸಸ್ಯ ಸಂಕುಲವನ್ನು ಸಂರಕ್ಷಿಸಬೇಕಾಗಿದೆ. ಬಿಸಿಲಿನಿಂದಾಗಿ ಸಸ್ಯಗಳು ಒಣಗುತ್ತಿವೆ. ಈ ಸಸ್ಯಗಳಿಗೆ ನೀರು ಪೂರೈಸಲು ಬೋರ್‌ವೆಲ್ ಕೊರೆಸಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ನೀರಿನ ಟ್ಯಾಂಕ್‌ನ ಪೈಪ್‌ಲೈನ್ ವ್ಯವಸ್ಥೆ ಹಾಳಾಗಿದೆ. ಕೂಡಲೇ ಇದನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿದರು.
ರಾಗಿಗುಡ್ಡ ಪ್ರದೇಶವನ್ನು ಜಿಧಿಕಾರಿಗಳು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು. ಈ ಪ್ರದೇಶದ ಸುತ್ತ ಭದ್ರವಾದ ಬೇಲಿ ನಿರ್ಮಿಸಬೇಕು. ಮುಂಗಾರು ಆರಂಭವಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಹಸರೀಕರಣವನ್ನು ಪ್ರಾರಂಭಿಸಲಿದೆ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ರಾಗಿಗುಡ್ಡ ಪ್ರದೇಶದಲ್ಲಿ ಸಸಿ ನೆಡುವಂತಾಗಬೇಕೆಂದು ಹೇಳಿದರು.
ಈ ಪ್ರದೇಶದಲ್ಲಿ ಅಪರೂಪದ, ವಿನಾಶದ ಅಂಚಿನಲ್ಲಿರುವ ಸಸ್ಯಗಳಿವೆ. ಇವುಗಳನ್ನು ಸಂರಕ್ಷಿಸ ಬೇಕಾಗಿದೆ. ಇದೊಂದು ಪಾರಂಪರಿಕ ತಾಣವಾಗಿದ್ದು, ಮುಂದಿನ ಪೀಳಿಗೆಗೆ ಇದನ್ನು ಉಳಿಸಿಬೇಕಾಗಿದೆ. ಈ ನಿಟ್ಟಿನಲ್ಲಿ ರಾಗಿಗುಡ್ಡ ಉಳಿಸಿ ಅಭಿಯಾನ ಕೈಗೊಳ್ಳಲಾಗಿದೆ. ಈ ಅಭಿಯಾನ ನಿರಂತರವಾಗಿ ಹೋರಾಟ ನಡೆಸಲಿದ್ದು ಇದರಲ್ಲಿ ನಾಗರೀಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಅಭಿಯಾನದ ಪ್ರಮುಖರಾದ ಕೆ.ವಿ.ವಸಂತ ಕುಮಾರ್, ಎಸ್.ಬಿ. ಅಶೋಕ್, ನಾಗರಾಜ್ ಶೆಟ್ಟರ್, ಆರ್. ಶ್ರೀಕಾಂತ್, ರಘುಪತಿ, ಲೋಕೇಶ್ವರಪ್ಪ, ದಿಗಂತ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.