ಪಿತೃಗಳ ಸ್ಮರಣೆಯ ಮಹಾಲಯ ಅಮಾವಾಸ್ಯೆ…

ಪಿತೃ ಋಣವು ಮನುಷ್ಯ ತೀರಿಸಲೇಬೇಕಾದ ಬಹುಮುಖ್ಯ ಋಣಗಳಂದು. ಏಕೆಂದರೆ, ನಮಗೆ ಈ ದೇಹ ದೊರೆತಿರುವುದೇ ಪಿತೃಗಳಿಂದ. ಅವರು ಸಂತೃಪ್ತರಾಗಿ ಆಶೀರ್ವಾದ ಮಾಡಿದರೆ ಅದಕ್ಕಿಂತ ಹೆಚ್ಚಿನ ಬಲ ಇನ್ನೊಂದಿಲ್ಲ. ಹೀಗಾಗಿ ಪಿತೃ ಕಾರ್ಯಕ್ಕೆ ಅರ್ಹರಾದವರು ಅದನ್ನು ಮಾಡಲೇಬೇಕು ಮತ್ತು ಕಿರಿಯರು ಇದರ ಪ್ರಸಾದ, ಮಂತ್ರಾಕ್ಷತೆ ಪಡೆಯಬೇಕು.
ಇದು ಪಿತೃಪಕ್ಷದ ಕೊನೆಯಲ್ಲಿ ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ. ನಮ್ಮನ್ನು ಅಗಲಿದ ಪಿತೃಗಳಿಗೆ ನೇರವಾಗಿ ಸ್ಮರಿಸಲು ಅಸಾಧ್ಯ. ಅದಕ್ಕಾಗಿ ಕೊನೆಯ ಪಕ್ಷ ವರ್ಷಕ್ಕೊಮ್ಮೆಯಾದರೂ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಸ್ಮರಿಸುವುದು ರೂಢಿ. ಈ ದಿನ, ಅಗಲಿದ ನಮ್ಮವರನ್ನು ಸ್ಮರಿಸಿ, ತಿಲ ದರ್ಪಣವನ್ನು, ಜಲ ದರ್ಪಣವನ್ನು ಹಾಗೂ ಬಲಿಯನ್ನು, ಪಿಂಡವನ್ನು… ನೀಡಿ ಸ್ಮರಿಸುತ್ತಾರೆ. ಇದು ಮಹಾಲಯ ಅಮಾವಾಸ್ಯೆಯ ವಿಶೇಷ.
ಭಾದ್ರಪದ ಮಾಸದ ಕೃಷ್ಣಪಕ್ಷಕ್ಕೆ ‘ಪಿತೃಪಕ್ಷ’ ಎನ್ನುತ್ತಾರೆ. ಈ ಪಕ್ಷಕ್ಕೆ ಮಹಾಲಯ ಪಕ್ಷ, ಮಹಾಲಯ ಅಮಾವಾಸ್ಯೆ, ಅಪರ ಪಕ್ಷವೆಂದು ಕರೆಯುತ್ತಾರೆ.
ಪಿತೃಪಕ್ಷವು ಹಿಂದೂ ಚಾಂದ್ರಮಾನ ತಿಂಗಳಾದ ಭಾದ್ರಪದ ಕೃಷ್ಣ ಪಕ್ಷದ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುತ್ತದೆ. ಒಬ್ಬರ ಮೂರು ತಲೆಮಾರುವರೆಗಿನ ಹಿರಿಯರು/ಪೂರ್ವಜರು/ಪಿತೃಗಳ ಆತ್ಮವು ಪಿತೃಲೋಕದಲ್ಲಿ ಅಂದರೆ ಭೂಮಿ ಮತ್ತು ಸ್ವರ್ಗದ ನಡುವಿನ ಪ್ರದೇಶದಲ್ಲಿ ವಾಸ ಮಾಡಿ ಕೊಂಡಿರುತ್ತಾರೆ. ಭೂಮಿಯಲ್ಲಿ ಮರಣ ಹೊಂದಿರುವವರ ಆತ್ಮವನ್ನು ಯಮಲೋಕಕ್ಕೆ ಬರಮಾಡಿ ಕೊಳ್ಳುವಾಗ ಅಲ್ಲಿ ಈ ಆತ್ಮದ ಪೂರ್ವಜರ ಪೈಕಿ ಮೊದಲಿನವರ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸುತ್ತಾನೆ ಎಂಬ ಪ್ರತೀತಿ ಇದೆ.
ಆದ್ದರಿಂದ ಈ ಪಿತೃ ಲೋಕದಲ್ಲಿ ಮೂರು ತಲೆಮಾರಿನ ಆತ್ಮಗಳು ಮಾತ್ರ ಇರುತ್ತವೆ. ಶ್ರಾದ್ಧ ಮಾಡುವಾಗ ಈ ಲೋಕದಲ್ಲಿರುವ ಮೂರು ತಲೆಮಾರಿನ ಪೂರ್ವಜರಿಗೆ ಮಾತ್ರ ಪಿಂಡ ಪ್ರದಾನ ಮತ್ತು ತರ್ಪಣ ಕೊಡುವ ಸಂಪ್ರದಾಯವಿದೆ. ಪಿತೃ ಪಕ್ಷದ ಪ್ರಾರಂಭದಲ್ಲಿ ಸೂರ್ಯನು ಕನ್ಯಾರಾಶಿ ಪ್ರವೇಶಿಸುವಲ್ಲಿಂದ ನಂತರದ ರಾಶಿಗೆ ಹೋಗುವವರೆಗಿನ ಸಮಯದಲ್ಲಿ ಪಿತೃಗಳ ಆತ್ಮವು ಭೂಮಿಯಲ್ಲಿರುವ ತಮ್ಮ ವಂಶಜರ ಮನೆಗಳಿಗೆ ಬಂದು ವಾಸಿಸುತ್ತವೆ ಎಂಬ ನಂಬಿಕೆ ಇದೆ.
ಪೌರಾಣಿಕ ನಿದರ್ಶನ :
ಮಹಾಭಾರತದ ನಾಯಕರಲ್ಲಿ ಒಬ್ಬನಾದ ಕರ್ಣ, ಯುದ್ಧದಲ್ಲಿ ಅರ್ಜುನನಿಂದ ಹತನಾದ. ದೇವದೂತರು ಈತನನ್ನು ಸ್ವರ್ಗ ಲೋಕಕ್ಕೆ ಕರೆದೊಯ್ಯುವಾಗ ದಾರಿ ಮಧ್ಯೆ ಈತನಿಗೆ ತಿನ್ನಲು ಏನೂ ಸಿಗುವುದಿಲ್ಲ. ಬದಲಾಗಿ ಎಲ್ಲೂ ನೋಡಿದರೂ ಬೆಳ್ಳಿ, ಬಂಗಾರ, ವಜ್ರ ವೈಡೂರ್ಯಗಳು ಮಾತ್ರ ಕಾಣ ಸಿಗುತ್ತವೆ. ಇದರಿಂದ ಕರ್ಣ ಮನನೊಂದು ಮೃತ್ಯು ದೇವ ಯಮನನ್ನು ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮ ಪ್ರತ್ಯಕ್ಷನಾಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನದಂದು ದಾನ ಮಾಡಲು ಹೇಳುತ್ತಾನೆ.
ಯಮನ ಆದೇಶದಂತೆ, ಕರ್ಣ ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಲ್ಲಿ ತನ್ನ ಹಿರಿಯರಿಗೆ, ಬಡವರಿಗೆ ಅನ್ನ, ವಸ್ತ್ರ ದಾನವನ್ನು ಮಾಡುತ್ತಾನೆ. ಇದರಿಂದ ಪಿತೃಗಳು ಸಂತುಷ್ಟರಾಗಿ ಆತನನ್ನು ಹರಸುತ್ತಾರೆ. ಇವರ ಆಶೀರ್ವಾದದಿಂದ ಕರ್ಣ ಯಾವುದೇ ತೊಂದರೆ ಇಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಉಖವಿದೆ.
ಸಾಮಾನ್ಯವಾಗಿ ನಮ್ಮಲ್ಲಿ ತಂದೆ-ತಾಯಿಗಳು ತೀರಿ ಹೋದ ದಿವಸವನ್ನು, ತಿಥಿ ಅಥವಾ ಶ್ರಾದ್ಧ ಎಂಬುದಾಗಿ ವರ್ಷಃಪ್ರತಿ ಮಾಡುವುದು ರೂಢಿ. ಆದರೆ ಪ್ರಕೃತಿ ವಿಕೋಪ, ಅಪಘಾತ… ಹೀಗೆ ಹಲವು ವಿಚಾರವಾಗಿ ದಿನ ತಿಳಿಯದೆ ಅಗಲಿದವರನ್ನು ಈ ಮಹಾಲಯ ದಿನದಂದು ಸ್ಮರಿಸುವುದು ವಾಡಿಕೆ. ಇದರಿಂದ ಅವರ ಹೆಸರಿನಲ್ಲಿ ಮಾಡುವ ದಾನಗಳು ಅವರಿಗೆ ನೇರವಾಗಿ ತಲುಪುತ್ತದೆ ಎನ್ನುವುದು ಪುರೋಹಿತರ ಹಿತೋಪದೇಶ.
ಈ ದಿನದಂದು ಅಗಲಿದ ಹಿರಿಯರಿಗೆ ಇಷ್ಟವಾದ ತಿಂಡಿ- ತಿನಿಸು, ಬಟ್ಟೆ, ಬರೆಗಳನ್ನು ಅವರ ಭಾವಚಿತ್ರದ ಬಳಿ ಇಟ್ಟು ಪೂಜೆ ಮಾಡಲಾಗುತ್ತದೆ. ನಂತರ ಮನೆಯವರು ಇದನ್ನು ಪ್ರಸಾದದ ರೂಪದಲ್ಲಿ ಸೇವಿಸಿ, ಬಡವರಿಗೆ ಇದನ್ನು ದಾನ ಮಾಡಲಾಗುತ್ತದೆ. ಇದರಿಂದ ನಮ್ಮ ಪಿತೃಗಳು ಸಂತುಷ್ಟರಾಗಿ ಮುಂದಿನ ಪೀಳಿಗೆಗೆ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬುವುದು ನಂಬಿಕೆ.
ಪಿತೃ ಪಕ್ಷದ ಕುರಿತ ಲೇಖಕನ ಮನದಾಳದ ಮಾತು :
ಅಣ್ಣ-ತಮ್ಮಂದಿರು ಅಕ್ಕರೆಯಿಂದ ಕುಟುಂಬದವರೆಲ್ಲ ಒಟ್ಟಾಗಿ ಸೇರಿಕೊಂಡು, ಹೇ, ನಮ್ಮಪ್ಪನಿಗೆ ಇದು ಇಷ್ಟ, ನಮ್ಮ ಅಮ್ಮನಿಗೆ ಇದು ಇಷ್ಟ ಅಂತ ಅವರ ನೆನೆದು ಎಡೆ ಮುಂದೆ ತಿಂಡಿ-ತಿನಿಸುಗಳು ಹಣ್ಣು-ಹಂಪಲುಗಳನ್ನು ಇಟ್ಟು ಅವರು ತಗೋಳಲ್ಲ ಅಂತ ಗೊತ್ತಿದ್ದರೂ ಪ್ರೀತಿಯಿಂದ ಕರೆಯುವ ಜನ..!!
ಅವರು ಬದುಕಿzಗ ಚೆನ್ನಾಗಿ ನೋಡಿಕೊಳ್ಳಲು ಯಾಕೆ ಒಟ್ಟಾಗಿ ಸೇರುವುದಿಲ್ಲ??
ಹೆತ್ತವರನ್ನು ಬದುಕಿzಗ ಕಡೆಗಣಿಸಿ, ಅವರ ನಿಧನದ ನಂತರ ಅವರ ಭಾವಚಿತ್ರಕ್ಕೆ ವರ್ಣರಂಜಿತ ಹೂವುಗಳನ್ನು ಅರ್ಪಿಸಿ ಪೂಜಿಸಿದರೆ ಮತ್ತೆ ಬದುಕಿ ಬರುವರೇ?
ನನ್ನ ಗಮನಕ್ಕೆ ಬಂದಂತೆ ಹಲವು ಮನೆಗಳಲ್ಲಿ ತಂದೆ-ತಾಯಿಯರನ್ನು ಹೊಟ್ಟೆಗೆ ಸರಿಯಾದ ಊಟ-ತಿಂಡಿ ನೀಡದೇ ನಿರ್ಧಾಕ್ಷಿಣ್ಯವಾಗಿ ಕಾಣಲಾಗುತ್ತಿದೆ. ಹಿರಿಯರು ಒಂದು ಮಾತನ್ನೂ ಹೇಳುವಂತಿಲ್ಲ. ಈಗ ಬದುಕಿರುವಷ್ಟು ದಿನ ಆ ಹಿರಿಯ ಜೀವಿಗಳು ಮುಂದೆ ಇರುತ್ತಾರೆಯೇ? ಇರುವಷ್ಟು ದಿನ ಅವರ ಸೇವೆ ಮಾಡುವ ಮೂಲಕ ಅವರ ಆಶೀರ್ವಾದ ಪಡೆದರೆ ಒಳ್ಳೆಯದಲ್ಲವೇ?
ಅವರ ಮನೆ, ಆಸ್ತಿ, ಹಣ ಎಲ್ಲರಿಗೂ ಬೇಕು. ಹಿರಿಯರು ಮಾತ್ರ ಯಾರಿಗೂ ಬೇಡ ಯಾಕೆ ? ನಾಳೆ ಅವರಿಗೂ ವಯಸ್ಸಾಗಿ ಅವರ ಮಕ್ಕಳೂ ಸಹ ಈ ರೀತಿ ಮಾಡಿದರೆ ಹೇಗೆ? ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಇನ್ನು ಮುಂದಾದರೂ ಸಂಬಂಧಿಸಿದವರು ತಮ್ಮನ್ನು ಬದಲಾಯಿಸಿಕೊಂಡು ಹಿರಿಯರ ಸೇವೆಗೆ ಮುಂದಾಗಲಿ ಎಂಬುದೇ ನಮ್ಮ ಹಾರೈಕೆ.
ಮುರುಳೀಧರ್ ಹೆಚ್. ಸಿ.
ಪತ್ರಕರ್ತರು, ಶಿವಮೊಗ್ಗ.ಮೊ: ೭೮೯೨೧೫೧೨೨೮, ೯೧೬೪೬೩೩೯೯೬.