ಬೌದ್ಧಿಕ ಆರೋಗ್ಯ ಕೆಟ್ಟವರಿಗೆ ಮೊದಲು ನೆರವಾಗಿ: ಸ್ವಾಮೀಜಿ

ಹೊಳೆಹೊನ್ನೂರು : ದೈಹಿಕ ಆರೋಗ್ಯ ಕೆಡಿಸಿಕೊಂಡವರಿಗೆ ಸಹಾಯ ಮಾಡಿದಂತೆ ಬೌದ್ಧಿಕ, ಆಧ್ಯಾತ್ಮಿಕ ಆರೋಗ್ಯ ಕೆಡಿಸಿ ಕೊಂಡವರಿಗೆ ಆದ್ಯತೆಯ ಮೇಲೆ ಸಹಾಯ ಮಾಡಲೇಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ದೈಹಿಕ ಆರೋಗ್ಯ ಹದಗೆಟ್ಟರೆ ಅದು ಇಂದ ನಾಳೆ ಸರಿಯಾಗ ಬಹುದು. ಆದರೆ ಬೌದ್ಧಿಕ ಆರೋಗ್ಯ ಕಟ್ಟರೆ ಭಾರೀ ಅಪಾಯ. ದುರ್ಮಾರ್ಗದಲ್ಲಿ ಹೋಗುತ್ತಾನೆ, ವ್ಯಸನಕ್ಕೆ ಬಲಿಯಾಗುತ್ತಾನೆ. ದುರ್ಮಾರ್ಗದಲ್ಲಿ ಆಗುತ್ತಾನೆ. ನಾಸ್ತಿಕನಾಗಿ ಬಿಡುತ್ತಾನೆ. ಇಡೀ ಮಾನವ ಜನ್ಮವನ್ನೇ ಹಾಳು ಮಾಡಿ ಕೊಳ್ಳುತ್ತಾನೆ. ಹೀಗಾಗಿ ರೋಗ ಆದರೆ ಔಷಧೋಪಚಾರ ಮಾಡಿದಂತೆ ಬೌದ್ಧಿಕ, ಆಧ್ಯಾತ್ಮಿಕ ಆರೋಗ್ಯ ಕೆಡಿಸಿಕೊಂಡವರಿಗೆ ಸನ್ಮಾರ್ಗ ತೋರಿ. ಇದು ಎಲ್ಲರ ಕರ್ತವ್ಯ ಎಂದರು.
ವಿದ್ವಾಂಸರು, ಸಜ್ಜನರು, ಸನ್ಯಾಸಿಗಳು ಯಾರೇ ಉಪದೇಶ ಮಾಡಿದರೂ ಕೆಲವರು ಬದಲಾವಣೆ ಆಗುವುದೇ ಇಲ್ಲ. ಉಪದೇಶ ಕೇಳಿದರೂ ಅನುಷ್ಠಾನ ಮಾಡುವುದಿಲ್ಲ. ಅದಕ್ಕೆ ಕಾರಣ ಆ ಜೀವಿಯ ಯೋಗ್ಯತೆ ಮತ್ತು ದೇವರು ಸದ್ಭುದ್ಧಿಯ ಪ್ರೇರಣೆ ಮಾಡುತ್ತಿಲ್ಲ ಎಂದರ್ಥ. ಏನೋ ಪ್ರತಿಬಂಧಕ ಇದೆ ಎಂದರ್ಥ. ಯಾವುದೇ ಸತ್ಕರ್ಮಗಳು ಮಾಡುವಾಗ ವಿಘ್ನಗಳು ಬರುತ್ತವೆ ಎಂದರೆ ನಾವು ಆ ಸತ್ಕರ್ಮವನ್ನು ಬಿಟ್ಟುಬಿಡಬಾರದು. ಮತ್ತೆ ಮತ್ತೆ ಸತ್ಕರ್ಮ ಮಾಡುವ ಪ್ರಯತ್ನ ಮಾಡಬೇಕು ಎಂದರು.
ಪಂಡಿತ ವೆಂಕಟೇಶಾಚಾರ್ಯ ಕೊರ್ಲಹಳ್ಳಿ ಮಾತನಾಡಿ, ಸತ್ಯಧರ್ಮ ತೀರ್ಥರ ವ್ಯಾಖ್ಯಾನ ವನ್ನು ಅರ್ಥ ಮಾಡಿಕೊಳ್ಳುವ ಯೋಗ್ಯತೆ ನಮ್ಮಂತಹ ಸಾಮಾನ್ಯ ರಿಗೆ ಇಲ್ಲ. ಅದರ ಪೂರ್ಣಭಾವ ಅರ್ಥವಾಗ ಬೇಕಾದರೆ ಸ್ವಾಮಿಗಳಂತಹ eನಿಗಳ ಬಾಯಿಂದ ಕೇಳಬೇಕು ಎಂದರು.
ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾ ಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾ ಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಸಿ.ಪಿ. ಮೊದಲಾದವರಿದ್ದರು.