ರಕ್ಷಾ ಬಂಧನದ ಮಹತ್ವ…
ಇತಿಹಾಸ : ಪಾತಾಳದಲ್ಲಿನ ಬಲಿರಾಜನ ಕೈಗೆ ಲಕ್ಷ್ಮೀಯು ರಾಖಿಯನ್ನು ಕಟ್ಟಿ ಅವನನ್ನು ತನ್ನ ಸಹೋದರನನ್ನಾಗಿ ಮಾಡಿಕೊಂಡಳು ಮತ್ತು ನಾರಾಯಣನನ್ನು ಮುಕ್ತಗೊಳಿಸಿದಳು. ಆ ದಿನ ಶ್ರಾವಣ ಹುಣ್ಣಿಮೆ ಇತ್ತು. ಭವಿಷ್ಯಪುರಾಣದಲ್ಲಿ ಹೇಳಿರುವಂತೆ ರಕ್ಷಾಬಂಧನವು ಮೂಲತಃ ರಾಜರಿಗಾಗಿತ್ತು. ರಾಖಿಯ ಒಂದು ಹೊಸ ಪದ್ಧತಿಯು ಇತಿಹಾಸಕಾಲದಿಂದ ಪ್ರಾರಂಭವಾಯಿತು.
ಭಾವನಿಕ ಮಹತ್ವ : ರಾಖಿಯನ್ನು ಸಹೋದರಿಯು ಸಹೋದರನ ಕೈಗೆ ಕಟ್ಟುವುದಿರುತ್ತದೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಸಹೋದರಿಯು ಸಹೋದರನಿಗೆ ರಾಖಿಯನ್ನು ಕಟ್ಟುವುದಕ್ಕಿಂತ ಯಾರಾದರೊಬ್ಬ ತರುಣನು ಪುರುಷನು ಯಾರಾದರೊಬ್ಬ ತರುಣಿಯಿಂದ ಸ್ತ್ರೀಯಿಂದ ರಾಖಿಯನ್ನು ಕಟ್ಟಿಸಿಕೊಳ್ಳುವುದು ಹೆಚ್ಚು ಮಹತ್ವ zಗಿದೆ; ಇದರಿಂದ ತರುಣಿಯ ಕಡೆಗೆ, ಸ್ತ್ರೀಯರ ಕಡೆಗೆ ನೋಡುವ ವಿಶೇಷವಾಗಿ ಯುವಕರ ಮತ್ತು ಪುರುಷರ ದೃಷ್ಟಿಕೋನವು ಬದಲಾಗುತ್ತದೆ.
ರಾಖಿಯನ್ನು ಕಟ್ಟುವುದು : ಅಕ್ಕಿ, ಬಂಗಾರ ಮತ್ತು ಬಿಳಿಸಾಸಿವೆಗಳನ್ನು ಒಂದುಗೂಡಿಸಿ ಸೆರಗಿನಲ್ಲಿ ಕಟ್ಟಿದರೆ ರಕ್ಷಾ ಅರ್ಥಾತ್ ರಾಖಿಯು ತಯಾರಾಗುತ್ತದೆ.
ಏನ ಬದ್ಧೋ ಬಲೀ ರಾಜ ದಾನವೇಂದ್ರೋ ಮಹಾಬಲಃ|
ತೇನ ತ್ವಾಮಪಿ ಬಧ್ನಾಮಿ ರಕ್ಷೇ ಮಾ ಚಲ ಮಾ ಚಲ||
ಅರ್ಥ: ಮಹಾಬಲಿ ಮತ್ತು ದಾನವೇಂದ್ರನಾದ ಬಲಿರಾಜನು ಯಾವುದರಿಂದ ಬದ್ಧನಾದನೋ, ಆ ರಾಖಿಯಿಂದ ನಾನು ನಿನ್ನನ್ನೂ ಕಟ್ಟುತ್ತೇನೆ. ಎಲೈ ರಾಖಿಯೇ, ನೀನು ವಿಚಲಿತಳಾಗಬೇಡ.
ಪ್ರಾರ್ಥನೆ : ಸಹೋದರಿಯು ಸಹೋದರನ ಕಲ್ಯಾಣಕ್ಕಾಗಿ ಮತ್ತು ಸಹೋದರನು ಸಹೋದರಿಯ ರಕ್ಷಣೆಗಾಗಿ ಪ್ರಾರ್ಥನೆಯನ್ನು ಮಾಡುವುದರೊಂದಿಗೆ ಇಬ್ಬರೂ ರಾಷ್ಟ್ರ ಮತ್ತು ಧರ್ಮರಕ್ಷಣೆಗಾಗಿ ನಮ್ಮಿಂದ ಪ್ರಯತ್ನವಾಗಲಿ ಎಂದು ಈಶ್ವರನಲ್ಲಿ ಪ್ರಾರ್ಥನೆಯನ್ನು ಮಾಡಬೇಕು.
ರಾಖಿಯು ಹೇಗಿರಬೇಕು : ರಾಖಿಯಿಂದ ಪಸರಿಸುವ ಲಹರಿಗಳು ಸಹೋದರ ಸಹೋದರಿ ಇಬ್ಬರಿಗೂ ಲಾಭದಾಯಕವಾಗಿವೆ. ಆದುದರಿಂದ ಚಿತ್ರ-ವಿಚಿತ್ರ ರಾಖಿಗಳನ್ನು ಉಪಯೋಗಿಸುವುದಕ್ಕಿಂತ ಈಶ್ವರೀ ತತ್ತ್ವತ್ವವನ್ನು ಆಕರ್ಷಿಸುವ ಸಾಮರ್ಥ್ಯವುಳ್ಳ ರಾಖಿಗಳನ್ನು ಉಪಯೋಗಿಸಬೇಕು. ಇಲ್ಲದಿದ್ದರೆ ಆ ರಾಖಿಯ ತ್ರಿಗುಣಗಳು (ಸತ್ತ್ವ, ರಜ, ತಮ) ಧರಿಸಿದವರ ಜೀವದ ಮೇಲೆ ಪರಿಣಾಮ ಬೀರುತ್ತವೆ.
ಮಣೆಯ ಸುತ್ತಲೂ ರಂಗೋಲಿಯನ್ನು ಬಿಡಿಸುವ ಹಿಂದಿನ ಉದ್ದೇಶ : ರಾಖಿಯನ್ನು ಕಟ್ಟಿಸಿಕೊಳ್ಳುವಾಗ ಸಹೋದರನು ಕುಳಿತುಕೊಳ್ಳುವ ಮಣೆಯ ಸುತ್ತಲೂ ಸಾತ್ವಿಕ ರಂಗೋಲಿಯನ್ನು ಬಿಡಿಸಬೇಕು. ಸಾತ್ವಿಕ ರಂಗೋಲಿಯಿಂದ ಸಾತ್ವಿಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಅದರಿಂದ ವಾತಾವರಣವು ಸಾತ್ವಿಕವಾಗುತ್ತದೆ.
ತುಪ್ಪದ ನಿಲಾಂಜನದಿಂದ ಆರತಿ ಬೆಳಗುವುದು : ರಾಖಿಯನ್ನು ಕಟ್ಟಿದ ನಂತರ ಸಹೋದರನಿಗೆ ತುಪ್ಪದ ನೀಲಾಂಜನದಿಂದ ಆರತಿಯನ್ನು ಬೆಳಗಿಸುತ್ತಾರೆ. ತುಪ್ಪದ ದೀಪವು ಶಾಂತರೀತಿಯಲ್ಲಿ ಉರಿಯುತ್ತದೆ. ಅದರಿಂದ ಸಹೋದರನಲ್ಲಿ ಶಾಂತ ರೀತಿಯಲ್ಲಿ ವಿಚಾರ ಮಾಡುವ ಬುದ್ಧಿಯು ವೃದ್ಧಿಯಾಗುವಲ್ಲಿ ಸಹಾಯವಾಗುತ್ತದೆ.
ಆರತಿಯ ತಟ್ಟೆಯಲ್ಲಿ ಬೆಲೆಬಾಳುವ ವಸ್ತುಗಳನ್ನು ಇಡದಿರುವ ಕಾರಣ: ಆರತಿಯ ತಟ್ಟೆಯಲ್ಲಿ ದುಡ್ಡು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಇಡಬಾರದು. ಇಂತಹ ವಸ್ತುಗಳನ್ನು ಇಟ್ಟರೆ ಸಹೋದರಿಯ ಮನಸ್ಸಿನಲ್ಲಿ ಆ ದಿಕ್ಕಿನಲ್ಲಿ ಅಪೇಕ್ಷೆ ನಿರ್ಮಾಣವಾಗಿ ಅದೇ ಸಂಸ್ಕಾರ ಪ್ರಬಲವಾಗುತ್ತದೆ. ಇದರಿಂದ ಅವಳಲ್ಲಿ ರಜ, ತಮ, ಸಂಸ್ಕಾರಗಳ ಪ್ರಮಾಣ ಹೆಚ್ಚಾಗಿ ಅವಳಲ್ಲಿರುವ ಪ್ರೇಮವು ಕಡಿಮೆ ಆಗಿ ಸಹೋದರನ ಜೊತೆ ಕಲಹ ನಿರ್ಮಾಣವಾಗುತ್ತದೆ.
ಸಹೋದರನಿಗೆ ರಾಖಿಯನ್ನು ಕಟ್ಟುವಾಗ ಸಹೋದರಿಯು ದ್ರೌಪದಿಯ ಭಾವವಿಟ್ಟುಕೊಂಡಿರಬೇಕು : ಶ್ರೀಕೃಷ್ಣನ ಬೆರಳಿನ ರಕ್ತಸ್ರಾವವನ್ನು ತಡೆಯಲು ದ್ರೌಪದಿಯು ತನ್ನ ಸೀರೆಯ ತುಂಡನ್ನು ಹರಿದು ಶ್ರೀ ಕೃಷ್ಣನ ಬೆರಳಿಗೆ ಕಟ್ಟಿದಳು. ಸಹೋದರಿಯು ತನ್ನ ಸಹೋದರನಿಗಾಗುವ ಕಷ್ಟವನ್ನು ಸಹಿಸುವುದಿಲ್ಲ. ಅವನ ಮೇಲೆ ಬಂದಿರುವ ಸಂಕಟವನ್ನು ದೂರ ಮಾಡಲು ಅವಳು ಎಲ್ಲವನ್ನು ಮಾಡಲು ಸಿದ್ಧವಾಗುತ್ತಾಳೆ. ರಾಖಿ ಹುಣ್ಣಿಮೆಯಂದು ಪ್ರತಿಯೊಬ್ಬ ಸಹೋದರಿಯು ರಾಖಿಯನ್ನು ಕಟ್ಟುವಾಗ ಇದೇ ಭಾವವನ್ನು ಇಟ್ಟುಕೊಳ್ಳಬೇಕು.
ರಕ್ಷಾಬಂಧನದಂದು ಸಹೋದರಿಯು ಯಾವುದೇ ಅಪೇಕ್ಷೆಗಳನ್ನು ಇಟ್ಟುಕೊಳ್ಳದೆ ರಾಖಿ ಕಟ್ಟುವುದರ ಮಹತ್ವ: ರಕ್ಷಾಬಂಧನದಂದು ಸಹೋದರಿಯು ತನ್ನ ಸಹೋದರನಿಂದ ಯಾವುದೇ ವಸ್ತುವನ್ನು ಪಡೆಯುವ ಅಪೇಕ್ಷೆಯನ್ನು ಇಟ್ಟುಕೊಂಡರೆ, ಆ ದಿನ ಪ್ರಾಪ್ತವಾಗುವ ಆಧ್ಯಾತ್ಮಿಕ ಲಾಭದಿಂದ ವಂಚಿತಳಾಗುತ್ತಾಳೆ. ಆಧ್ಯಾತ್ಮಿಕ ದೃಷ್ಟಿಯಲ್ಲಿ ಕೊಡುಕೊಳ್ಳುವ ಲೆಕ್ಕವನ್ನು ಕಡಿಮೆ ಮಾಡಲು ಈ ದಿನವು ಮಹತ್ವzಗಿದೆ.
ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಮಾಡಬೇಕಾದ ಪ್ರಯತ್ನಗಳು : ಈ ದಿನವನ್ನು ನೆನಪಿಟ್ಟುಕೊಂಡು ಸಹೋದರ ಸಹೋದರಿಯ ಬಾಂಧವ್ಯವನ್ನು ಬಲಪಡಿಸಲು ಪ್ರಯತ್ನಿಸಬೇಕು
ಸಮಾಜದಲ್ಲಿರುವ ಇತರರೊಂದಿಗಿರುವ ಬಾಂಧವ್ಯ ವೃದ್ಧಿಸಲು ಪ್ರಯತ್ನಿಸಬೇಕು.
ಈಶ್ವರನಲ್ಲಿರುವ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಬೇಕು.
ರಾಖಿಯ ಮಾಧ್ಯಮದಿಂದಾಗುವ ದೇವತೆಗಳ ವಿಡಂಬನೆಯನ್ನು ತಡೆಗಟ್ಟಿರಿ: ಇತ್ತೀಚೆಗೆ ರಾಖಿಯ ಮೇಲೆ ಓಂ ಅಥವಾ ದೇವತೆಗಳ ಚಿತ್ರಗಳಿರುತ್ತವೆ. ರಾಖಿಯನ್ನು ಉಪಯೋಗಿಸಿದ ನಂತರ ಅದು ಆಚೀಚೆ ಬಿದ್ದು ದೇವತೆಗಳ ಅಥವಾ ಧರ್ಮಪ್ರತೀಕಗಳ ವಿಡಂಬನೆಯಾಗುತ್ತದೆ. ಇದರಿಂದ ಪಾಪ ತಗಲುತ್ತದೆ. ಇದನ್ನು ತಡೆಗಟ್ಟಲು ರಾಖಿಯನ್ನು ನೀರಿನಲ್ಲಿ ವಿಸರ್ಜಿಸಬೇಕು!
ಆಧಾರ : ಸನಾತನ ನಿರ್ಮಿತ ಗ್ರಂಥ ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ
ಸಂಗ್ರಹ : ವಿನೋದ್ ಕಾಮತ್
ರಾಜ್ಯ ವಕ್ತಾರರು, ಸನಾತನ ಸಂಸ್ಥೆ.