ಸಾಹಿತ್ಯದ ಕುರಿತು ಯುವ ಸಮೂಹದಲ್ಲಿ ಆಸಕ್ತಿ ಹೆಚ್ಚಿಸಬೇಕಿದೆ…

ಶಿಕಾರಿಪುರ: ಸಾಹಿತ್ಯ ಕ್ಷೇತ್ರ ದಿಂದ ಯುವಪೀಳಿಗೆ ವಿಮುಖ ವಾಗುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು ಈ ದಿಸೆಯಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚಾಗಿಸುವ ಕಾರ್ಯ ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಾಹಿತಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಕತ್ತಿಗೆ ಚನ್ನಪ್ಪ ತಿಳಿಸಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ನಡೆದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ತಾಲೂಕು ಐತಿಹಾಸಿವಾಗಿ ಅತ್ಯಂತ ಪ್ರಸಿದ್ದವಾಗಿದ್ದು, ೧೨ನೇ ಶತಮಾನ ದಲ್ಲಿನ ಸಾಮಾಜಿಕ ಕ್ರಾಂತಿಗೆ ಕಾರಣಕರ್ತರಾದ ಹಲವು ಶಿವಶರಣರು ತಾಲೂಕಿನಲ್ಲಿ ಜನ್ಮತಳೆದಿರುವ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ ಎಂದ ಅವರು, ತಾಲೂಕಿನ ಇತಿಹಾಸ ಅತ್ಯಂತ ಶ್ರೀಮಂತವಾಗಿದ್ದು ದಾಖಲಿಸುವ ಕಾರ್ಯ ಅಗತ್ಯವಾಗಿದೆ. ಈ ದಿಸೆಯಲ್ಲಿ ಯುವ ಸಮುದಾಯ ಹೆಚ್ಚಿನ ಆಸಕ್ತಿ ಕಾಳಜಿಯನ್ನು ಪ್ರದರ್ಶಿಸುವಂತೆ ತಿಳಿಸಿದರು.
ಸಾಹಿತ್ಯ ಕ್ಷೇತ್ರದಿಂದ ಯುವ ಪೀಳಿಗೆ ಅಂತರ ಕಾಪಾಡುತ್ತಿದ್ದು, ಸಾಹಿತ್ಯದಿಂದ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ಈ ದಿಸೆಯಲ್ಲಿ ಸಾಹಿತ್ಯ ಕ್ಷೇತ್ರವನ್ನು ನಿರ್ಲಕ್ಷಿಸದಂತೆ ತಿಳಿಸಿದ ಅವರು, ಸಾಹಿತ್ಯ ಕ್ಷೇತ್ರಕ್ಕೆ ತಾಲೂಕಿನ ಕೊಡುಗೆ ಅಪಾರ ವಾಗಿದ್ದು, ಶಿವಶರಣರು ಸರಳ ವಚನಗಳ ಮೂಲಕ ಜೀವನಾನುಭವ ಕಟ್ಟಿಕೊಟ್ಟಿದ್ದಾರೆ ಮಹಾನ್ ಗ್ರಂಥಗಳಿಗೆ ಸಮನಾದ ತತ್ವಪದಗಳನ್ನು ನೀಡಿದ ಶರಣರನ್ನು ನಿತ್ಯ ಸ್ಮರಿಸಬೇಕಾಗಿದ್ದು ತಾಲೂಕಿನ ಅಪೂರ್ವ ಇತಿಹಾಸವನ್ನು ದಾಖಲಿಸಬೇಕಾಗಿದೆ. ಶರಣ ಶ್ರೇಷ್ಟರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕ, ದೋಸೆ ಪಿಟ್ಟವ್ವ, ಕಂಬಳಿ ನಾಗಿದೇವ, ಇಕ್ಕದ ಮಾರಯ್ಯ,ಮೂಕ ಮಲ್ವವ್ವೆ ಸಹಿತ ಹಲವು ಶರಣರಿಗೆ ಜನ್ಮ ನೀಡಿದ ಇಲ್ಲಿನ ಮಣ್ಣು ಪವಿತ್ರತೆಯನ್ನು ಹೊಂದಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಕೆ.ಪಿ ಮಲ್ಲಿಕಾರ್ಜುನ್ ಮಾತನಾಡಿ, ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ಪಠ್ಯಕ್ಕೆ ಸಮನಾಗಿ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಕಾಲೇಜು ಮೇಲುಸುತಿ ವಾರಿ ಸಮಿತಿ ಅಧ್ಯಕ್ಷ ಕೆ.ಹಾಲಪ್ಪ ವಹಿಸಿ ಮಾತನಾಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಾಂಚನಾ ಕುಮಾರ್ ಮುಖಂಡ ವಸಂತಗೌಡ, ರೂಪ, ನಾಗಾನಾಯ್ಕ, ಭಾಗ್ಯ, ಶಿಲ್ಪ, ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.