ಎನ್.ಡಿ. ಸುಂದರೇಶ್ ರೈತಕುಲದ ಕಣ್ಮಣಿ : ಶೋಭಾ

ಶಿವಮೊಗ್ಗ: ರೈತ ನಾಯಕ ಎನ್.ಡಿ. ಸುಂದರೇಶ್ ಅವರು ತಮ್ಮ ಜೀವಿತಾವಧಿಯಲ್ಲಿ ಸದಾ ರೈತರ ಸಮಸ್ಯೆಗಳಿಗೆ ಮಿಡಿಯುತ್ತಿದ್ದರು. ಅನ್ಯಾಯ ಆದಾಗ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿ ರೈತರಿಗೆ ನ್ಯಾಯ ಕೊಡಿಸುತ್ತಿದ್ದರು ಎಂದು ಎನ್.ಡಿ. ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಎನ್.ಡಿ. ಸುಂದರೇಶ್ ಪತ್ನಿ ಶೋಭಾ ಸುಂದರೇಶ್ ಹೇಳಿದ್ದಾರೆ.
ಅವರು ಇಂದು ನಗರದ ವೀರಶೈವ ಪುಣ್ಯಾಶ್ರಮದಲ್ಲಿ ಎನ್.ಡಿ. ಸುಂದರೇಶ್ ಪ್ರತಿಷ್ಠಾನದ ವತಿಯಿಂದ ಡಾ.ಪಂಡಿತ್ ಪುಟ್ಟರಾಜ ಗವಾಯಿ ಗಳವರ ಅಂಧಮಕ್ಕಳ ಸಂಗೀತ ವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಎನ್.ಡಿ. ಸುಂದರೇಶ್ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.


ಪ್ರತಿ ರೈತರು ರಾಷ್ಟ್ರೀಯತೆ ಮೆರೆಯ ಬೇಕು. ಪ್ರತಿ ಮನೆಗಳಲ್ಲೂ ತ್ರಿವರ್ಣ ಧ್ವಜ ಹಾರಾಡಬೇಕು ಎಂಬುದು ಕೂಡ ಎನ್.ಡಿ ಸುಂದರೇಶ್ ಕನಸಾಗಿತ್ತು. ರಾಜ್ಯ ರೈತ ಸಂಘದ ಸಂಸ್ಥಾಪಕರಾಗಿ ಕೆಚ್ಚೆದೆಯ ಧೀಮಂತ ಹೋರಾಟ ಗಾರರಾಗಿ ರೈತಕುಲದ ಕಣ್ಮಣಿಯಾಗಿ ತಮ್ಮ ಇಡೀ ಜೀವನವನ್ನೇ ರೈತರಿಗಾಗಿ ಮುಡಿಪಾಗಿಟ್ಟ ಸುಂದರೇಶ್ ಅವರ ಜನ್ಮದಿನಾಚರಣೆ ಅಂಧ ಸಂಗೀತ ಕಲಾವಿದರ ಜೊತೆ ಮಾಡುತ್ತಿರುವುದು ಅವರಿಗೆ ಗೌರವ ಸಲ್ಲಿಸಿದಂತೆ ಎಂದರು
ಪ್ರಧಾನಿ ಮೋದಿಯವರು ಹರ್ ಘರ್ ಮೆ ತಿರಂಗ್ ಎಂದು ಕರೆ ನೀಡಿ ಪ್ರತಿ ಮನೆಯಲ್ಲಿ ರಾಷ್ಟ್ರೀಯತೆಯ ಕಲ್ಪನೆ ಮೂಡಿಸಿದ್ದಾರೆ. ಎನ್.ಡಿ ಸುಂದರೇಶ್ ಬಹಳ ಹಿಂದೆಯೇ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರೈತರ ಬೇಡಿಕೆಗಳ ಈಡೇರಿಕೆಗೆ ರಾಷ್ಟ್ರ ಮಟ್ಟದಲ್ಲಿ ರೈತ ಸಂಘಟನೆ ಬಲಗೊಳ್ಳಬೇಕು ಮತ್ತು ರೈತರು ಸಂಘಟಿತರಾಗಬೇಕು ಎಂಬುದು ಅವರ ಕನಸಾಗಿತ್ತು ಎಂದರು.
ಈ ಸಂದರ್ಭದಲ್ಲಿ ಸಂಗಮೇಶ್ವರ ಗವಾಯಿಗಳು ತಂಬೂರಿ ವಾದನದ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಹುಮಾಯೂನ್ ಹರ್ಲಾಪುರ್, ಸಂಸ್ಕೃತಿ ಶಿಕ್ಷಕ ಮಂಜುನಾಥ ಮಾಶಾಳ, ಸುಜತಾ ಬಸವರಾಜ್, ಎನ್.ಎಸ್. ಸುಧಾಂಶು ಮತ್ತಿತತರರಿದ್ದರು.