ನಾಳೆಯಿಂದ ಕುಂಸಿ – ಅರಸಾಳುವಿನಲ್ಲಿ ರೈಲು ನಿಲುಗಡೆ: ಬಿವೈಆರ್
ಶಿವಮೊಗ್ಗ: ಮೇ ತಿಂಗಳಿನಲ್ಲಿ ರೈಲ್ವೆ ಜನರಲ್ ಮ್ಯಾನೇಜರ್‌ರೊಂದಿಗೆ ಹುಬ್ಬಳ್ಳಿಯಲ್ಲಿ ನಡೆಸಲಾದ ಸಭೆಯಲ್ಲಿ ಹಾಗೂ ಇತ್ತೀಚೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ವಿವಿಧ ರೈಲ್ವೆ ಯೋಜನೆ ಗಳ ಬಗ್ಗೆ ಮನವಿ ಸಲ್ಲಿಸಿದ ಸಮಯದಲ್ಲಿಯೇ ಹಾರನಹಳ್ಳಿ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡುವಂತೆ ಸಂಸದ ಬಿ.ವೈ. ರಾಘವೇಂದ್ರ ವಿನಂತಿ ಹಿನ್ನೆಲೆ ಯಲ್ಲಿ ಈ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ.
ಪ್ರಸ್ತುತ ಇದೀಗ ನೈರುತ್ಯ ರೈಲ್ವೆ ವಲಯ ಈ ಕೆಳಕಂಡ ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆ ನೀಡಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು, ಇದೇ ಗುರುವಾರ ೨೪ರಿಂದ ರೈಲುಗಳನ್ನು ನಿಲುಗಡೆ ಮಾಡಲಾಗುತ್ತಿದೆ.
ಹಾರನಹಳ್ಳಿಯಲ್ಲಿ ರೈಲು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿರುವ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ರವರು ಹಾರನಹಳ್ಳಿ ರೈಲ್ವೆ ನಿಲ್ದಾಣವು ಕುಂಸಿ ರೈಲ್ವೆ ನಿಲ್ದಾಣಕ್ಕೆ ಕೇವಲ ೫-೬ ಕಿ.ಮೀ. ಒಳಗಡೆ ಇರುವುದರಿಂದ, ತಾಂತ್ರಿಕವಾಗಿ ರೈಲು ನಿಲುಗಡೆ ಕಷ್ಟಸಾಧ್ಯವೆಂದು ತಿಳಿಸಿದ್ದಾರೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಹಾರನಹಳ್ಳಿಯಲ್ಲೂ ರೈಲು ನಿಲುಗ ಡೆಗೆ ಒತ್ತಾಯ ಮಾಡಲಾಗುವುದು. ಪ್ರಸ್ತುತ ನಮ್ಮ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರವರಿಗೆ, ರೈಲ್ವೆ ಬೋರ್ಡ್‌ನವರಿಗೆ, ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್‌ರವರಿಗೆ, ರೈಲ್ವೆ ಮೈಸೂರು ಡಿವಿ ಜನಲ್ ಮ್ಯಾನೇಜರ್ ಶಿಲ್ಪಿ ಅಗರವಾಲ್ ರವರಿಗೆ ಸಂಸದರು ಧನ್ಯವಾದ ಸಲ್ಲಿಸಿದ್ದಾರೆ.
ಪ್ರಾಯೋಗಿಕವಾಗಿ ನೀಡಲಾ ಗುತ್ತಿರುವ ಈ ನಿಲುಗಡೆಯ ಕೊಡುಗೆ ಯನ್ನು ಪ್ರಯಾಣಿಕರು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದು ವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದು ಕೊಳ್ಳುವಂತೆ ಸಂಸದ ರಾಘವೇಂದ್ರ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
ರೈಲು ಸಂಖ್ಯೆ ೧೬೨೦೫ : ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ನಿಲ್ದಾಣದಲ್ಲಿ ಸಂಜೆ ೪.೦೩ಕ್ಕೆ ಮತ್ತು ಕುಂಸಿ ರೈಲು ನಿಲ್ದಾಣದಲ್ಲಿ ಸಂಜೆ ೪.೨೧ಕ್ಕೆ ನಿಲುಗಡೆ ಇರುತ್ತದೆ. ರೈಲು ಸಂಖ್ಯೆ ೧೬೨೦೬ : ಮೈಸೂರು- ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಕುಂಸಿ ನಿಲ್ದಾಣದಲ್ಲಿ ಬೆಳಿಗ್ಗೆ ೧೧.೩೧ಕ್ಕೆ ಮತ್ತು ಅರಸಾಳು ರೈಲು ನಿಲ್ದಾಣದಲ್ಲಿ ೧೧.೪೮ಕ್ಕೆ ನಿಲುಗಡೆ ಇರುತ್ತದೆ. ರೈಲು ಸಂಖ್ಯೆ ೧೬೨೨೮ : ತಾಳಗುಪ್ಪ- ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ರಾತ್ರಿ ೧೦.೦೫ಕ್ಕೆ ನಿಲುಗಡೆ ಇರುತ್ತದೆ. ರೈಲು ಸಂಖ್ಯೆ ೧೬೨೨೭ : ಮೈಸೂರು- ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ ೫.೪೫ಕ್ಕೆ ನಿಲುಗಡೆ ಇರುತ್ತದೆ ಎಂದು ಸಂಸದರು ತಿಳಿಸಿದ್ದಾರೆ.