ಒಳ ಮೀಸಲಾತಿ ವಿರೋಧಿಸಿ ಬಿಎಸ್‌ವೈ ಮನೆ ಮೇಲೆ ಕಲ್ಲ್ಲು ತೂರಾಟ: ಪೊಲೀಸ್ ಸರ್ಪಗಾವಲು…
ಶಿಕಾರಿಪುರ: ರಾಜ್ಯ ಸರ್ಕಾರ ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವಿರೋಧಿಸಿ ಬಂಜಾರ (ಲಂಬಾಣಿ) ಸಮಾಜದವರು ಇಂದು ಹಮ್ಮಿಕೊಂಡಿದ್ದ ಹೋರಾಟ ಉಗ್ರ ರೂಪಕ್ಕೆ ಪರವರ್ತನೆಗೊಂಡ ಹಿನ್ನೆಲೆಯಲ್ಲಿ ಇಂದು ಶಿಕಾರಿಪುರ ಪಟ್ಟಣ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.
ಮೀಸಲಾತಿ ವಿರೋಧಿಸಿ ಇಂದು ಪ್ರತಿಭಟನೆ ನಡೆಸಿದವರು ಮಾಜಿ ಸಿಎಂ ಬಿಎಸ್‌ವೈ ಮನೆಗೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪೊಲೀಸ್ ಬ್ಯಾರಿಕೇಡ್ ಕಿತ್ತುಹಾಕಿ ಒಳಗೆ ಪ್ರವೇಶಿಸಿದ್ದಲ್ಲದೆ ಮನೆ ಮೇಲಿದ್ದ ಬಿಜೆಪಿ ಧ್ವಜ ಕಿತ್ತು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಕೆಲವರು ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು, ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಘೋಷಣೆ ಕೂಗಿದ್ದಾರೆ.
ಪೊಲೀಸರ ಸೂಚನೆ ಧಿಕ್ಕರಿಸಿ, ಏಕಾಏಕಿ ಪ್ರತಿಭಟನಾಕಾರರು ಕಲ್ಲು ತೂರಿzರೆ. ಉದ್ರಿಕ್ತಗೊಂಡ ಪ್ರತಿಭಟನಾ ಕಾರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿzರೆ. ಕಲ್ಲುತೂರಾಟ ದಿಂದ ಕೆಲ ಪೊಲೀಸ್ ಸಿಬ್ಬಂದಿಗೂ ಸಣ್ಣ ಪುಟ್ಟ- ಗಾಯಗಳಾಗಿವೆ.ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.
ಸಾವಿರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಆಗಲಿಲ್ಲ. ನಂತರ ಪರಿಸ್ಥಿತಿ ಕೈಮೀರು ತ್ತಿದ್ದಂತೆ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಯಿತು.
ಯಡಿಯೂರಪ್ಪ ಜನ್ಮದಿನದ ಅಂಗ ವಾಗಿ ಶಿಕಾರಿಪುರ ತಾಲೂಕಿ ನಾದ್ಯಂತ ಸೀರೆ ವಿತರಣೆ ಮಾಡಲಾಗಿತ್ತು. ಇಂದು ಆ ಸೀರೆಗಳನ್ನು ಪ್ರತಿಭಟನೆಗೆ ತೆಗೆದುಕೊಂಡು ಬರಲಾಗಿತ್ತು. ಪ್ರತಿಭಟನೆ ವೇಳೆ ಯಡಿಯೂರಪ್ಪ ಕುಟುಂಬದಿಂದ ನೀಡಿದ ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಲಾಯಿತು.
ಯಡಿಯೂರಪ್ಪನವರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಅನೇಕರನ್ನು ಬಂಧಿಸಲಾಯಿತು. ಕೆಲವರು ಲಾಠಿ ರುಚಿ ತಿಂದು ಕಾಲ್ಕಿತ್ತರು.
ಲಂಬಾಣಿ, ಬೋವಿ ಸಮುದಾಯಕ್ಕೆ ಸಿಗುತ್ತಿದ್ದ ಮೀಸಲಾತಿ ಕಡಿತಗೊಳಿಸಿ ಇತರೆ ಸಮುದಾಯ ಗಳಿಗೆ ಹಂಚಿಕೆ ಮಾಡಿ ರಾಜ್ಯ ಬಿಜೆಪಿ ಸರ್ಕಾರ ಕೈಗೊಂಡ ಐತಿಹಾಸಿಕ ತೀರ್ಮಾನವನ್ನು ಪ್ರತಿಭಟನಾ ಕಾರರು ವಿರೋಧಿಸಿದರಲ್ಲದೇ ಇದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದರು.
ಪೋಲಿಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಶಾಂತಗೊಂಡಿದ್ದು, ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಪ್ರತಿಭಟನಾಕಾರರು ಮತ್ತೆ ತಮ್ಮ ಗ್ರಾಮಗಳತ್ತ ತೆರಳಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಶಿಕಾರಿಪುರ ಪಟ್ಟಣದಾದ್ಯಂತ ಪೊಲೀಸರ ಸರ್ಪಗಾವಲು ಹಾಕಲಾಗಿದೆ.