ಸ್ತ್ರಿಸ್ವಸಹಾಯ ಗುಂಪುಗಳು ಉಳಿತಾಯ – ಬದ್ದತೆಯಿಂದ ವ್ಯವಹರಿಸಿ ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ: ಮೀನಾಕ್ಷಿ

ಶಿಕಾರಿಪುರ : ಉಳಿತಾಯ ಮತ್ತು ನಿಯಮ ಬದ್ಧತೆ ವ್ಯವಹಾರ ದಿಂದ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು ಆರ್ಥಿಕವಾಗಿ ಬಲಿಷ್ಟವಾಗಿ ದೇಶದ ಅಭಿವೃದ್ದಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಕೆನರಾ ಬ್ಯಾಂಕಿನ ಕೇಂದ್ರ ಕಛೇರಿಯ ಎಜಿಎಂ ಮೀನಾಕ್ಷಿ ಎನ್ ಹೆಮ್ಮೆ ವ್ಯಕ್ತಪಡಿಸಿದರು.
ಪಟ್ಟಣದ ಕೆನರಾ ಬ್ಯಾಂಕ್ ಬ್ರಾಂಚ್-೧ ಮತ್ತು ೨ ಶಾಖೆಗಳ ಆಶ್ರಯದಲ್ಲಿ ಬಸವಾಶ್ರಮದ ಸಭಾ ಭವನದಲ್ಲಿ ಸ್ತ್ರೀ ಶಕ್ತಿಸ್ವಸಹಾಯ ಸಂಘದ ಸದಸ್ಯರಿಗೆ ನಡೆದ ಬೃಹತ್ ಕೃಷಿ ಸಾಲ ವಿತರಣೆ ಮತ್ತು ಆರ್ಥಿಕ ಸಾಕ್ಷರತೆಯ ಅರಿವು ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುರುಷ ದುಡಿದು ಆರ್ಥಿಕವಾಗಿ ಬೆಳೆದರೆ ಮನೆ ಅಭಿವೃದ್ದಿಯಾಗುತ್ತದೆ,ಮಹಿಳೆ ದುಡಿದು ಆರ್ಥಿಕವಾಗಿ ಬೆಳೆದರೆ ಈ ದೇಶಕ್ಕೆ ಕೊಡುಗೆ ಕೊಡುವುದರ ಜತೆಗೆ ಅಭಿವೃದ್ದಿಗೆ ಸಹಾಯ ಆಗಬಲ್ಲಳು ಎಂದರು.
ಸ್ವ-ಸಹಾಯ ಗುಂಪಿಗೆ ಕೆನರಾ ಬ್ಯಾಂಕಿನ ೬ ಶಾಖೆಯಿಂದ ೨೫ ಸ್ತ್ರೀ ಶಕ್ತಿ ಸಂಘಗಳಿಗೆ ರೂ ೨.೧೩ ಕೋಟಿ ಸಾಲ ವಿತರಿಸಲಾಗುತ್ತಿದೆ. ಈ ಹಣವನ್ನು ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಬ್ಯಾಂಕು ಮಹಿಳೆಯರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬ್ಯಾಂಕಿನಲ್ಲಿ ವ್ಯವಹಾರ ನಿಯಮಿತವಾಗಿಸಿ ಸಿಬಿಲ್‌ನ್ನು ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳಬೇಕು ಎಂದರು.
ಕೆನರಾ ಬ್ಯಾಂಕಿನ ಶಿವಮೊಗ್ಗ ಕ್ಷೇತ್ರಿಯ ಕಛೇರಿಯ ಸಹಾಯಕ ಮುಖ್ಯ ಪ್ರಬಂಧಕ ವೆಂಕಟರಾಮನ್ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಮಹಿಳೆಯರ ಸ್ವ-ಸಹಾಯ ಗುಂಪು ಗಳು ಅತ್ಯಂತ ಕ್ರಿಯಾಶೀಲವಾಗಿ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದು ಸಾಲ ಪಡೆದು ಸ್ವಾವಲಂಬನೆಯ ಜೀವನಕ್ಕೆ ಸಿದ್ಧರಾಗಿದ್ದಾರೆ.ಪಡೆದ ಸಾಲವನ್ನು ಸದುಪಯೋಗ ಪಡಿಸಿ ಕೊಂಡು ಸಕಾಲಕ್ಕೆ ಮರುಪಾವತಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದು ಸಮಾಜದ ಅಭಿವೃದ್ಧಿಯ ದೋತ್ಯಕವಾಗಿದೆ ಎಂದು ತಿಳಿಸಿದರು.
ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಮಾತನಾಡಿ, ಸರಳ ಜೀವನಕ್ಕೆ ಸಾಲದ ಅಗತ್ಯವಿಲ್ಲ ಆದರೆ ಆದಾಯ ಉತ್ಪನ್ನ ಚಟುವಟಿಕೆ ಮಾಡಲು ಸಾಲದ ಅವಶ್ಯಕತೆ ಇದೆ. ಈ ಚಟುವಟಿಕೆಯಿಂದ ಮಹಿಳೆಯರು ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿದೆ ಆದರೆ ಸಾಲ ದೊರೆಯುವುದೆಂದು ಎಲ್ಲೆಡೆ ಮಾಡಬಾರದು.ಬ್ಯಾಂಕ್ ನಿಮ್ಮ ಏಳ್ಗೆಗಾಗಿ ಇರುವುದರಿಂದ ಅಲ್ಲಿಯೇ ಸಾಲ ಮಾಡುವುದು ಉತ್ತಮ ಎಂದ ಅವರು ಉಳಿತಾಯ ಪ್ರತಿ ಸಂಘದ ಮುಖ್ಯ ಉದ್ದೇಶವಾಗಬೇಕು ಎಂದರು.
ವೇದಿಕೆಯಲ್ಲಿ ಕ್ಷೇತ್ರಿಯ ಕಛೇರಿ ಪ್ರಬಂಧಕ ಮನೋಹರ್, ಕೆನರಾ ಬ್ಯಾಂಕ್ ಬ್ರಾಂಚ್-೧ ರ ಪ್ರಬಂಧಕ ಅಂಜುಮಾನ್ ಓಜ,ಬ್ರಾಂಚ್-೨ ರ ಪ್ರಬಂಧಕ ಉಮೇಶ್,ಕೃಷಿ ವಿಸತಿರಣಾಧಿಕಾರಿ ವಾಮದೇವ್, ಗೋಪಿಕಾ ಮೆನನ್,ಉತ್ಕರ್ಷ ಈಸೂರು, ಹರ್ಷವರ್ಧನ್ ಸಾಲೂರು,ಸ್ವಾತಿ ಪಾರ್ವತಿ ಶಿರಾಳಕೊಪ್ಪ, ಅರ್ಪಿತ ಕಪ್ಪನಹಳ್ಳಿ, ಮತ್ತಿತರರು ಉಪಸ್ಥಿತರಿದ್ದರು.