ಮಣಿಪುರ ಹಿಂಸಾಚಾರ: ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಸಮಾಜವಾದಿ ಪಾರ್ಟಿಯಿಂದ ಡಿಸಿಗೆ ಮನವಿ

ಶಿವಮೊಗ್ಗ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಘಟಕದ ವತಿಯಿಂದ ಇಂದು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮಣಿಪುರದಲ್ಲಿ ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ದೇಶವೇ ತಲೆ ತಗ್ಗಿಸುವಂತಹ ಅಮಾನುಷ ಕೃತ್ಯವಾಗಿದೆ ಎಂದು ಪ್ರತಿಭಟನಕಾರರು ತೀವ್ರವಾಗಿ ಖಂಡಿಸಿದರು.
ಕಳೆದ ೮೦ ದಿನಗಳಿಂದ ನಡೆಯುತ್ತಿರುವ ಜನಾಂಗೀಯ ಘರ್ಷಣೆಯಿಂದಾಗಿ ಸುಮಾರು ೧೫೬ ಮಂದಿ ಬಲಿಯಾಗಿದ್ದಾರೆ. ಕುಕಿ ಸಮುದಾಯದ ಜನಾಂಗದ ಸುಮಾರು ೧೦ಸಾವಿರ ಮನೆಗಳನ್ನು ಹಾಗೂ ಕೆಲವು ಚರ್ಚ್‌ಗಳನ್ನು ಸುಟ್ಟು ಹಾಕಲಾಗಿದೆ. ಈಗಲೂ ಸಹ ಅಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದೆ. ರಾಜಕೀಯವಾಗಿ ಬಲಿಷ್ಠ ಹಾಗೂ ಜನಸಂಖ್ಯೆಯಲ್ಲಿ ಹೆಚ್ಚಿರುವ ಮೈತೇಯಿ ಸಮಾಜಕ್ಕೆ ಮೀಸಲಾತಿ ಬಲ ಸಿಕ್ಕಿದ್ದು, ಹಿಂಸಾಚಾರಕ್ಕೆ ಕಾರಣವಾಗಿರಬಹುದು. ಈ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.
ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಮಣಿಪುರ ರಾಜ್ಯದ ಜನರ ಪ್ರಾಣ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಮತ್ತು ಮಣಿಪುರ ಸರ್ಕಾರಕ್ಕೆ ಸೂಕ್ತ ಆದೇಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ಜಿಲ್ಲಾ ಸಂಯೋಜಕ ಹೆಚ್‌ಎನ್. ಶ್ರೀನಿವಾಸ, ರಾಜಪ್ಪ, ಪ್ರಮುಖರಾದ ಪ್ರೊ. ಕೃಷ್ಣಪ್ಪ, ಎ.ಡಿ. ಲಕ್ಷ್ಮೀಪತಿ, ಮಂಜುನಾಥ್, ಗುತ್ಯಪ್ಪ. ಲೋಕೇಶ್ ತಮ್ಮಡಿಹಳ್ಳಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.