ಕಾಮ್ರೇಡ್ ಲಿಂಗಪ್ಪ ನಿಧನ: ಕಳಚಿತು ಶಿವಮೊಗ್ಗ ಪತ್ರಿಕೋಧ್ಯಮದ ಹಿರಿಯ ಕೊಂಡಿ…

ಶಿವಮೊಗ್ಗ: ಹಿರಿಯ ಪತ್ರಕರ್ತ ಕಾಮ್ರೆಡ್ ಲಿಂಗಪ್ಪ (೯೭) ವಯೋ ಸಹಜ ಅನಾರೋಗ್ಯದಿಂದ ಮಾ.೨೪ರ ನಿನ್ನೆ ರಾತ್ರಿ ಶಿವಮೊಗ್ಗ ಗೋಪಾಲಗೌಡ ಬಡಾವಣೆಯ ಆರೈಕೆ ಆಸ್ಪತ್ರೆಯಲ್ಲಿ ನಿಧನರಾದರು. ಈ ಮೂಲಕ ಜಿಲ್ಲೆಯ ಪತ್ರಿಕೋದ್ಯಮದ ಹಿರಿಯ ಕೊಂಡಿ ಕಳಚಿದಂತಾಗಿದೆ.
ಮೃತರು ಓರ್ವ ಪುತ್ರಿ ಹಾಗೂ ಅಪಾರ ಬಂದುಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಪ್ರಕಟಗೊಳ್ಳುತ್ತಿದ್ದ ಕ್ರಾಂತಿ ಭಗತ್ ಪತ್ರಿಕೆಯ ಸಂಪಾದಕರಾಗಿದ್ದ ಕಾವೆಡ್ ಲಿಂಗಪ್ಪ, ಇಳಿವಯಸ್ಸಿನಲ್ಲೂ ಪತ್ರಿಕಾ ಚಟುವಟಿಕೆ ಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ನಗರದಲ್ಲಿ ನಡೆಯುವ ಎಲ್ಲಾ ಕಾರ್‍ಯಕ್ರಮಗಳಿಗೆ ತಾವೇ ವರದಿಗಾರಿಕೆಗೆ ಬಂದು ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ತಮ್ಮ ನೇರ, ನಿಷ್ಠುರ ಮಾತು, ಬರವಣಿಗೆಯಿಂದ ಪತ್ರಿಕೋದ್ಯ ಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

ಗೋಪಾಳದ ಪ್ರೆಸ್ ಕಾಲೋನಿಯಲ್ಲಿ ರುವ ಮೃತರ ಸ್ವಗೃಹದಲ್ಲಿ ಇಂದು ಮಧ್ಯಾಹ್ನದ ವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾ ಗಿತ್ತು. ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿತು.
ಕಾಮ್ರೆಡ್ ಲಿಂಗಪ್ಪರ ಹೋರಾಟದ ಜೀವನ: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಎಂ.ಎನ್. ಕೋಟೆ ಗ್ರಾಮದಲ್ಲಿ ೧೯೨೬ರಲ್ಲಿ ಜನಿಸಿದ ಕಾಮ್ರೆಡ್ ಎಂ. ಲಿಂಗಪ್ಪ, ಚಿಕ್ಕ ವಯಸ್ಸಿನಲ್ಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ರಾಗಿದ್ದರು. ಬೆಂಗಳೂರಿನಲ್ಲಿ ಹೊಟೇಲ್ ಮತ್ತಿತರೆಡೆ ಕೂಲಿ ಕೆಲಸ ಮಾಡುತ್ತಿದ್ದ ಅವರು, ಅಲ್ಲಿಂದ ಮುಂಬೈಗೆ ತೆರಳಿ ಅಲ್ಲೂ ಸಹ ಹೊಟೇಲ್‌ನಲ್ಲಿ ಕಾರ್ಯನಿರ್ವಹಿಸು ತ್ತಿದ್ದರು. ತದನಂತರ ಅಲ್ಲಿ ಟೈಲರ್ ಆಗಿ ಕೆಲಸಕ್ಕೆ ಸೇರ್ಪಡೆಗೊಂಡರು.
ಹೊಟೇಲ್ ಕ್ಲೀನರ್, ಟೈಲರ್ ವೃತ್ತಿ ಮಾಡುವ ವೇಳೆ ಕಾರ್ಮಿಕ ಸಂಘಗಳನ್ನು ಕಟ್ಟಿಕೊಂಡು ಹಲವು ಅನ್ಯಾಯದ ವಿರುದ್ಧ ಹತ್ತು ಹಲವು ಹೋರಾಟಗಳನ್ನು ನಡೆಸಿದ್ದರು. ಈ ವೇಳೆ ಕಮ್ಯುನಿಷ್ಟ್ ಸಿದ್ದಾಂತಕ್ಕೆ ಮೊರೆಹೋದ ಅವರು, ನಂತರದ ದಿನಗಳಲ್ಲಿ ಕಮ್ಯುನಿಷ್ಟ್ ಹೋರಾಟಗಾರರ ಸಂಪರ್ಕ ಪಡೆದರು. ಅಂದಿನ ಬಲಿಷ್ಠ ಕಮ್ಯುನಿಷ್ಟ್ ನಾಯಕಾದ ಜಾರ್ಜ್ ಫರ್ನಾಂಡಿಸ್, ನಂಬೂದರಿ ಪಾಡ್ ಸೇರಿದಂತೆ ಹಲವು ನಾಯಕರ ಜೊತೆಗೂಡಿ ಕ್ರಾಂತಿಕಾರಿ ಹೋರಾಟಗಳಲ್ಲಿ ಭಾಗಿಯಾಗಿದ್ದರು ಹಾಗೂ ಪೊಲೀಸರಿಂದ ಬಂಧನಕ್ಕೊಳಗಾಗಿ ಸಾಕಷ್ಟು ಬಾರಿ ಜೈಲುಪಾಲಾ ಗಿದ್ದರು.

ಸಂತಾಪ: ನಾಡಿನ ಹಿರಿಯ ಪತ್ರಕರ್ತ ಹಾಗೂ ಕ್ರಾಂತಿ ಭಗತ್ ಪತ್ರಿಕೆಯ ಸಂಪಾದಕ ಕಾಮ್ರೆಡ್ ಎಂ. ಲಿಂಗಪ್ಪ ಅವರ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಆರ್. ಪ್ರಸನ್ನ ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜೆಡಿಎಸ್ ಯುವಮುಖಂಡರಾದ ಎಸ್.ಎಲ್. ನಿಖಿಲ್, ಪ್ರೇಮ್ ಕುಮಾರ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಕಾಂತ್, ಅಧ್ಯಕ್ಷ ಗೋಪಾಲ್ ಎಸ್. ಯಡಗೆರೆ ಮತ್ತು ಪದಾಧಿಕಾರಿಗಳು, ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಅಧ್ಯಕ್ಷ ಎನ್. ಮಂಜು ನಾಥ್ ಮತ್ತು ಪದಾಧಿಕಾರಿಗಳು, ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಅ. ರಾಕೇಶ್ ಡಿಸೋಜ, ಕೆಡಬ್ಲ್ಯು ಜೆಎನ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಮತ್ತು ಪದಾಧಿಕಾರಿಗಳು, ಐಎಫ್‌ಎಸ್‌ಎಂಎನ್‌ನ ಜಿಲಾ ಘಟಕದ ಅಧ್ಯಕ್ಷ ಜಿ.ಆರ್. ಷಡಾಕ್ಷರಪ್ಪ ಮತ್ತು ಪದಾಧಿಕಾರಿಗಳು, ಎಡಿಟರ್ಸ್ ಕ್ಲಬ್‌ನ ಅಧ್ಯಕ್ಷ ಶಿ.ಜು. ಪಾಷಾ ಮತ್ತು ಪದಾಧಿಕಾರಿಗಳು, ಸಂಪಾದಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ನಗರದ ಹಿರಿಯ ಮತ್ತು ಕಿರಿಯ ಪತ್ರಕರ್ತರು ತೀವ್ರ ಸಂತಾಪ ಸೂಚಿಸಿದಾರೆ.