ರಾಜಕೀಯದಲ್ಲಿ ಕ್ರೀಡಾ ಮನೋಭಾವವಿರಬೇಕೇ ಹೊರತು ಕ್ರೀಡೆಯಲ್ಲಿ ರಾಜಕಾರಣ ಸಲ್ಲದು
ಶಿಕಾರಿಪುರ: ಕ್ರೀಡೆ ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತಗೊಳಿಸದೆ ನಂತರ ದಲ್ಲಿಯೂ ಮುಂದುವರಿಸಿದಲ್ಲಿ ಅರಿವಾಗದ ರೀತಿಯಲ್ಲಿ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ವತಿಯಿಂದ ೨೦೨೨-೨೩ನೇ ಶೈಕ್ಷಣಿಕ ಸಾಲಿನ ಕುವೆಂಪು ವಿವಿ ಅಂತರ ಕಾಲೇಜು ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ಸಧೃಡ ಆರೋಗ್ಯಕ್ಕೆ ಕ್ರೀಡೆ ಬಹು ಮುಖ್ಯವಾಗಿದ್ದು,ಆರೋಗ್ಯವಂತ ಮನಸ್ಸಿನಿಂದ ಮಾತ್ರ ಬದುಕಿನಲ್ಲಿ ಸಾಧನೆ ಸಾಧ್ಯ ಎಂದರಲ್ಲದೇ, ವಿದ್ಯಾರ್ಥಿ ಜೀವನದಲ್ಲಿ ಪಠ್ಯಕ್ಕೆ ಸರಿಸಮಾನ ಮಹತ್ವವನ್ನು ಕ್ರೀಡೆಗೆ ನೀಡುವಂತೆ ತಿಳಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಕ್ರೀಡೆಗೆ ಮಹತ್ವ ನೀಡದೆ ನಂತರದಲ್ಲಿಯೂ ಮುಂದುವರಿಸಿ ದಲ್ಲಿ ಅರಿವಾಗದ ರೀತಿಯಲ್ಲಿಯೇ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಸಂಸದರಾಗುವ ಮುನ್ನಾ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಕುವೆಂಪು ವಿವಿ ವ್ಯಾಪ್ತಿಯ ಸೆನೆಟ್ ಸದಸ್ಯನಾಗಿ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದ್ದನ್ನು ಸ್ಮರಿಸಿ ಕೊಂಡ ಅವರು, ಇದೀಗ ಕ್ರೀಡೆಗೆ ವಿಪರೀತ ಅವಕಾಶವಿದ್ದು ಶಿವಮೊಗ್ಗದಲ್ಲಿ ಅಂದಾಜು ರೂ.೩೦ ಕೋಟಿ ವೆಚ್ಚದಲ್ಲಿ ಖೇಲೋ ಇಂಡಿಯಾ ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಎಲ್ಲ ಕ್ರೀಡೆಗೆ ಸಂಕೀರ್ಣ ದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜಕೀಯದಲ್ಲಿ ಕ್ರೀಡಾ ಮನೋಭಾವವಿರಬೇಕು ಕ್ರೀಡೆಯಲ್ಲಿ ರಾಜಕಾರಣ ಸಲ್ಲದು ಎಂದ ಅವರು, ತೀರ್ಪುಗಾರರು ಈ ಬಗ್ಗೆ ಹೆಚ್ಚು ಜಾಗೃತಿಯನ್ನು ವಹಿಸಬೇಕು. ಸೋಲು ಗೆಲವು ಕ್ರೀಡೆಯಲ್ಲಿ ಸಹಜವಾಗಿದ್ದು ಸಮಾನವಾಗಿ ಸ್ವೀಕರಿಸಿ ಸೋಲನ್ನು ಗೆಲುವಾಗಿಸುವ ಛಾತಿಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಶೇಖರ್, ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ರವೀಂದ್ರ ಗೌಡ, ಲೋಕೋಪ ಯೋಗಿ ಇಲಾಖೆ ಎಇಇ ಜಗದೀಶ್ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಡಾ.ಅನಿಲ್ಕುಮಾರ್, ಸುಧೀರ, ವಿನಯ್, ರಾಘವೇಂದ್ರ ಸೇರಿದಂತೆ ವಿವಿ ವ್ಯಾಪ್ತಿಯ ಶಿವಮೊಗ್ಗ ಚಿಕ್ಕಮಗಳೂರು ಕಾಲೇಜಿನ ೪೨ ತಂಡದ ೫೦೦ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.