ಜನ್ಮ ಕೊಡುವವಳು ತಾಯಿಯಾದರೆ, ಮರುಜನ್ಮ ಕೊಡವವನೇ ವೈದ್ಯ…
ಶಿವಮೊಗ್ಗ: ವೈದ್ಯನೆಂದರೆ eನ, ಧೈರ್ಯ, ತಾಳ್ಮೆ, ಜೀವಾಪಾಯ ಲೆಕ್ಕಿಸದ, ಸದಾ ಒತ್ತಡದಲ್ಲಿದ್ದರೂ , ಸಾಂತ್ವಾನವನ್ನು ನೀಡುವ ಅಲ್ಪಾಯುಷಿ. ಜನ್ಮಕೊಡುವವಳು ತಾಯಿ , ಆದರೆ ಮರುಜನ್ಮ ಕೊಡುವವನು ವೈದ್ಯ. ವೈದ್ಯ ಸಮೂಹವನ್ನು ಜನರು ಗೌರವದಿಂದ ಕಾಣಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಥಟ್ ಅಂತ ಹೇಳಿ ಕಾರ್ಯಕ್ರಮ ಖ್ಯಾತಿಯ ಡಾ . ನಾ . ಸೋಮೇಶ್ವರ್ ಅವರು ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆಯ ರಾಷ್ಟೀಯ ವೈದ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ , ವೈದ್ಯರ ದಿನಾಚರಣೆಯ ಇತಿಹಾಸ , ಬೇರೆ ರಾಷ್ಟ್ರಗಳಲ್ಲಿ ಆಚರಿಸುವ ರೀತಿ , ಸಮಾಜ ಈ ದಿನವನ್ನು ಆಚರಿಸಬೇಕಾದ ಅಗತ್ಯತೆ ಹಾಗು ಮಾನದಂಡಗಳ ಬಗ್ಗೆ ‘ ಕಾಯಕ ಯೋಗಿಗಳು’ ಎಂಬ ವಿಷಯದಡಿ ಯಲ್ಲಿ ವಿಸ್ತಾರವಾಗಿ ವಿಶ್ಲೇಷಿಸಿದರು.
ಐಎಂಎ ಅಧ್ಯಕ್ಷ ಡಾ| ಅರುಣ್ .ಎಂ .ಎಸ್ ಅವರು ಮಾತನಾಡಿ, ಎಷ್ಟೋ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಒಂದು ಎಮರ್ಜೆನ್ಸಿ ಬಂದಾಗ ಹಗಲು, ರಾತ್ರಿ ಎನ್ನದೆ ಓಡೋಡಿ ಬಂದು ರೋಗಿಗಳ ಸೇವೆ ಮಾಡುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ತಾವು ಆರಾಧಿಸುವ ಒಬ್ಬ ವೈದ್ಯರು ಇದ್ದೇ ಇರುತ್ತದೆ. ಇಂತಹ ಕ್ಷಣಗಳನ್ನು ನೆನಪಿನಲ್ಲಿ ಮರುಕಳಿಸುವ ಸುದಿನ ವಾಗಿ ರೋಗಿಗಳು ವೈದ್ಯರನ್ನು ಈ ದಿನ ಭೇಟಿ ಮಾಡಿ ಅಭಿನಂದಿಸಿದರೆ ಅದಕ್ಕಿಂತ ಬೇರೇನೂ ಉಡುಗರೆ ವೈದ್ಯರಿಗೆ ಬೇಕಿಲ್ಲ ಎಂದು ನುಡಿದರು .
ಉಪಾಧ್ಯಕ್ಷ ಡಾ. ರವೀಶ್ ಅವರು ಮಾತನಾಡಿ , ಭಾರತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ಸಲ್ಲಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥವಾಗಿ ಜು.೧ ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಜುಲೈ ೧೯೯೧ರಲ್ಲಿ ಆಚರಿಸಲಾಯಿತು. ಡಾ ಬಿಧಾನ್ ಚಂದ್ರ ರಾಯ್ ಅವರು ೧ ಜುಲೈ ೧೮೮೨ ರಂದು ಜನಿಸಿದ್ದರು. ಇವರು ವಿಧಿವಶರಾಗಿದ್ದು ೧ ಜುಲೈ ೧೯೬೨ರಂದು. ಹೀಗಾಗಿ, ಇವರ ಸ್ಮರಣಾರ್ಥ ಜುಲೈ ೧ನ್ನು ವೈದ್ಯರ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದು ದಿನದ ಇತಿಹಾಸ ಹಾಗು ಪ್ರಾಮುಖ್ಯತೆ ಬಗ್ಗೆ ಬೆಳಕು ಚೆಲ್ಲಿದರು .
ಶಿವಮೊಗ್ಗದ ಐಎಂಎ ಸದಸ್ಯ ರಾದ ಡಾ . ನಾಗೇಂದ್ರ ಹಾಗು ಡಾ . ಲತಾ ನಾಗೇಂದ್ರ , ಡಾ . ಅಶೋಕ್ ಕುಮಾರ್ , ಡಾ . ಮಹೇಶ್ , ಡಾ . ನರೇಂದ್ರ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು .
ಸಮಾಜ ಸೇವೆಗಾಗಿ ವೈದ್ಯ ಸಮೂಹದಿಂದ ಊರಿನ ಪ್ರಮುಖರಾದ ರೋಟರಿಯನ್ ಅಶ್ವತ್ತನಾರಾಯಣ ಶೆಟ್ಟಿ ಅವರಿಗೆ ಗೌರವ ಸಮರ್ಪಣೆ ನೆರವೇರಿತು . ಐಎಂಎ ಪತ್ರಿಕೆಯಾದ ಐಎಂಎ – ಪಲ್ಸ್ ಅನ್ನು ಈ ಸಂದರ್ಭದಲ್ಲಿ ಸಂಪಾದಕಿ ಡಾ . ಶುಭ್ರತ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಗೊಳಿಸಲಾಯಿತು . ಕಾರ್ಯದರ್ಶಿ ಡಾ. ರಕ್ಷಾ ರಾವ್ ಸ್ವಾಗತಿಸಿದರು ಹಾಗು ಖಜಂಚಿ ಡಾ . ಶಶಿಧರ್ ವಂದನಾರ್ಪಣೆ ಮಾಡಿದರು . ೧೫೦ ಕ್ಕೂ ಹೆಚ್ಚು ಹಿರಿಯ ಕಿರಿಯ ವೈದ್ಯರು ಹಾಗು ಕುಟುಂಬದವರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು .