ಸಡಗರ ಸಂಭ್ರಮದಿಂದ ಜರುಗಿದ ಗೆಡ್ಡೆರಾಮೇಶ್ವರ ಬ್ರಹ್ಮರಥೋತ್ಸವ…

ನ್ಯಾಮತಿ: ಪವಿತ್ರ ತುಂಗ ಭದ್ರಾ ನದಿಯ ಮದ್ಯದ ದ್ವೀಪದಲ್ಲಿರುವ ಇತಿಹಾಸ ಪ್ರಸಿದ್ಧವಾದ ನ್ಯಾಮತಿ ತಾಲೂಕಿನ ಕುರುವ, ಗೋವಿನಕೋವಿ, ರಾಂಪುರ, ಗ್ರಾಮಗಳ ಮಧ್ಯ ಭಾಗದ ಗೆಡ್ಡೆ ಶ್ರೀ ರಾಮೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಸಡಗರ-ಸಂಭ್ರಮದಿಂದ ವಿಜಭಂಣೆಯಾಗಿ ನಡೆಯಿತು.
ಪ್ರತೀ ವರ್ಷದ ಪದ್ಧತಿಯಂತೆ ಯುಗಾದಿ ಹಬ್ಬದಂದೆ ನಡೆಯುವ ಗೆಡ್ಡೆ ಶ್ರೀ ರಾಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವವು ಬುಧವಾರ ಬೆಳಗ್ಗೆಯಿಂದಲೇ ಪುಣ್ಯಾಹ , ಪಂಚಾಮೃತ ಸಹಿತ ರುದ್ರಾಭಿಷೇಕ, ಕಂಕಣಧಾರಣೆ ಉಚ್ರಾಯ, ಧಾರ್ಮಿಕ ವಿಧಿವಿಧಾನಗಳ ಪೂಜ ಕೈಂಕರ್ಯಗಳು ಮತ್ತು ಹೋಮ -ಹವನಾದಿಗಳು ಪ್ರಾರಂಭಗೊಂಡಿದ್ದವು. ಕುರುವ, ರಾಂಪುರ, ಗೋವಿನಕೋವಿ, ಬಸವನಹಳ್ಳಿ, ಮರಿಗೊಂಡನಹಳ್ಳಿ ಗ್ರಾಮದ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಎಡೆಯನ್ನು ತಂದು ನೈವೇದ್ಯ ಅರ್ಪಿಸಿದ ಮೇಲೆ ತುಂಗಾ-ಭದ್ರಾ ನದಿಗೆ ಗಂಗೆ ಪೂಜೆಯೊಂದಿಗೆ ಬ್ರಹ್ಮರಥೋತ್ಸವ ನಡೆಯುವುದು ವಿಶೇಷ ಅದರಲ್ಲೂ ನ್ಯಾಮತಿ ತಾಲೂಕಿಗೆ ಹೊಸ ಸಂವತ್ಸರ (ವರ್ಷ)ದ ಮೊದಲ ರಥೋತ್ಸವ ವೆಂಬ ಹೆಗ್ಗಳಿಕೆಗೆ ಗೆಡ್ಡೆ ಶ್ರೀ ರಾಮೇಶ್ವರಸ್ವಾಮಿ ಪಾತ್ರವಾಗಿದೆ.
ಗೆಡ್ಡೆ ಶ್ರೀ ರಾಮೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಯಲ್ಲಿ ಸಕಲವಾಧ್ಯಗಳೊಂದಿಗೆ ಮೆರವಣಿಗೆ ನಡೆಸಿ ಅಲಂಕೃತ ಗೊಂಡಿದ್ದ ರಥಕ್ಕೆ ಪುರೋಹಿತ ವೃಂದವು ಧಾರ್ಮಿಕ ವಿಧಿವಿಧಾನಗಳ ಪೂಜ ಕೈಂಕರ್ಯಗಳನ್ನು ನಡೆಸಿ ಬಲಿ ಅನ್ನ ಹಾಕಿ ಗೆಡ್ಡೆ ಶ್ರೀ ರಾಮೇಶ್ವರ ಸ್ವಾಮಿಯ ಉತ್ಸವಮೂರ್ತಿ ರಥರೋಹಣವಾಗುತ್ತಿದ್ದಂತೆ ಭಾಗವಹಿಸಿದ್ದ ಭಕ್ತರು ರಥಕ್ಕೆ ಹಣ್ಣು ಕಾಯಿ ಹೊಡೆದು ರಥವನ್ನು ಎಳೆದರು.
ತುಂಗಭದ್ರಾ ನದಿಯು ಭದ್ರಾವತಿ ತಾಲೂಕಿನ ಕೂಡಲಿ ಬಳಿ ಸಂಗಮವಾಗುವ ನದಿ ಹೊನ್ನಾಳಿ ತಾಲೂಕಿನ ರಾಂಪುರ ಮತ್ತು ಕುರುವ ಗ್ರಾಮದ ಹತ್ತಿರ ಕವಲೊಡೆಯುವ ತುಂಗಭದ್ರೆ ಪುನಃ ರಾಂಪುರ ಮತ್ತು ಗೋವಿನಕೋವಿ ಗ್ರಾಮದ ಬಳಿ ಸಂಗಮವಾಗುತ್ತದೆ ಹಾಗಾಗಿ ಈ ಸ್ಥಳ ದ್ವೀಪವಾಗಿ ಪರಿವರ್ತನೆಗೊಂಡಿರುವುದರಿಂದ ಅತ್ಯಂತ ಪ್ರಸಿದ್ಧಿಯಾಗಿದೆ ವೀಕ್ಷಣೆಗಾಗಿ ಸಾವಿರಾರು ಯಾತ್ರಿಕರು ಆಗಮಿಸಿ ಇಲ್ಲಿರುವ ಸಂಗಮನಾಥನಲ್ಲಿ ಮಿಂದು ಗೆಡ್ಡೆ ರಾಮೇಶ್ವರ ಸ್ವಾಮಿ, ಗೆಡ್ಡೆ ದುರ್ಗಮ್ಮ ಮತ್ತು ಶ್ರೀ ಸದ್ಗುರು ಶಿವಯೋಗಿ ಹಾಲಸಿದ್ದೇಶ್ವರರ ಗವಿಗೆ ಪೂಜೆಯನ್ನು ಸಲ್ಲಿಸುತ್ತಾರೆ.
ಧಾರ್ಮಿಕ ವಿಧಿವಿಧಾನಗಳ ಪೂಜ ಕೈಂಕರ್ಯಗಳನ್ನು ಪುರೋಹಿತರ ನೇತೃತ್ವದಲ್ಲಿ ಜರುಗಿದವು ಈ ರಥೋತ್ಸವಕ್ಕೆ ಸುತ್ತ-ಮುತ್ತಲ ಗ್ರಾಮಗಳಾದ ರಾಂಪುರ, ಬುಳ್ಳಾಪುರ, ಹೊಟ್ಯಾಪುರ, ಗೋವಿನಕೋವಿ, ಕುರುವ, ಅರಬಗಟ್ಟೆ ಇನ್ನೂ ಮುಂತಾದ ಗ್ರಾಮಸ್ಥರು ಗ್ರಾಮ ದೇವತೆಗಳ ಉತ್ಸವದೊಂದಿಗೆ ಆಗಮಿಸುವರು. ನೆರೆಯುವ ನೂರಾರು ಭಕ್ತರಿಗೆ ಸೇವಾಕರ್ತರು ದಣಿವಾರಿಸುವ ಸಲುವಾಗಿ ಬೆಲ್ಲದ ಪಾನಕ, ಮಜ್ಜಿಗೆ ಹಂಚುವುದು ವಿಶೇಷ. ಈ ರಥೋತ್ಸವಕ್ಕೆ ದಾವಣಗೆರೆ ಜಿಯಲ್ಲದೇ ಹಾವೇರಿ, ಶಿವಮೊಗ್ಗ, ಬಳ್ಳಾರಿ ಜಿಯ ಭಕ್ತಾದಿಗಳು ಭಾಗವಹಿಸುತ್ತಾರೆ. ಕೋವಿಡ್ ಕಾರಣಕ್ಕಾಗಿ ಹಿಂದಿನ ಎರಡು ವರ್ಷ ಈ ವರ್ಷದಷ್ಟು ಸಂಭ್ರಮದಿಂದ ಜತ್ರೆ ನಡೆದಿರಲಿಲ್ಲ. ದೇಗುಲಕ್ಕೆ ಹಾಗೂ ದೇವರ ಮೂರ್ತಿಗಳನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಭಕ್ತರು ಸಾಕ್ಷಿಯಾದರು.