ವೃತ್ತಿಪರತೆಯಿಂದ ಮಾತ್ರ ವಿಶ್ವಾಸಾರ್ಹತೆ ವೃದ್ಧಿ: ಆರಗ ರವಿ

ಶಂಕರಘಟ್ಟ : ಮಾಧ್ಯಮಗಳು ಒಂದು ಸಿದ್ಧಾಂತಕ್ಕೆ ಜೋತು ಬಿದ್ದು, ಅಥವಾ ಒಬ್ಬ ವ್ಯಕ್ತಿಯೇ ಶ್ರೇಷ್ಠ ಎಂಬ ಆಯಾಮದಲ್ಲಿ ಸುದ್ದಿ ಪ್ರಸರಣೆ ಮಾಡುತ್ತಿದ್ದರೆ ಮಾಧ್ಯಮ ಗಳ ವಿಶ್ವಾಸಾರ್ಹತೆ ಕುಂದುತ್ತದೆ. ಅಲ್ಲದೆ ಮಾಧ್ಯಮ ಸೇರಿದಂತೆ ಯಾವುದೇ ಕ್ಷೇತ್ರಗಳಲ್ಲಿ ನಡೆಯುವ ಅತಿರೇಕಗಳಿಗೆ ಕೊನೆಯಿರುವುದು ನಿಶ್ಚಿತ ಎಂದು ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಆರಗ ರವಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ವ್ಯಕ್ತಿಗಿಂತ ವಿಚಾರಗಳು ಮುಖ್ಯ ಎಂಬುದನ್ನು ಇತಿಹಾಸ ಸದಾ ಎತ್ತಿತೋರಿದೆ. ಎಲ್ಲರನ್ನು ನಗಣ್ಯ ಗೊಳಿಸಿ ತಾನೇ ಏಕಮೇವಾಧಿಪತ್ಯ ಸಾಧಿಸಬೇಕೆಂದು ಯಾರಾದರೂ ಹೊರಟಲ್ಲಿ ಅದು ವ್ಯವಸ್ಥೆಗೆ ಮಾರಕ. ಪತ್ರಕರ್ತರಾಗುವವರು ಯಾವುದೇ ಸಿದ್ಧಾಂತಗಳಿಗೆ ಮಾರು ಹೋಗದೆ ಜೀವಪರ ಸಿದ್ಧಾಂತವನ್ನು ಮಾತ್ರ ಅನುಸರಿಸಿ, ಧರ್ಮಾತೀತ ವಾಗಿ, ಜತ್ಯಾತೀತಾಗಿ ಸಕಲರನ್ನು ಸಮಾನವಾಗಿ ಕಂಡು ಕಾರ್ಯ ನಿರ್ವಹಿಸಬೇಕು ಎಂದರು.
ಪತ್ರಕರ್ತರು ಭಾವೋದ್ರೇಕ, ಸಮೂಹಸನ್ನಿಯಲ್ಲಿ ಕಳೆದು ಹೋಗದೆ ಸ್ವತಂತ್ರವಾಗಿ ಯೋಚಿಸಿದಲ್ಲಿ, ಅತಿರೇಕಗಳನ್ನು ಪ್ರಶ್ನಿಸುತ್ತಾ ನಡೆದಲ್ಲಿ ಸಮಾಜ ಬಯಸುವ ಉತ್ತಮ ಪತ್ರಕರ್ತ ನಾಗಲು ಸಾಧ್ಯ ಎಂದರು.
ಮಹಾಭಾರತದಲ್ಲಿ ಸಂಜಯ ಪಾತ್ರಧಾರಿ ಒಬ್ಬ ವಸ್ತುನಿಷ್ಠ ಪತ್ರಕರ್ತನಾಗಿ ಉತ್ತಮ ಉದಾಹರಣೆಯಾಗಿzನೆ. ಅಂದರೆ ಕಂಡದನ್ನು ಕಂಡಹಾಗೆ ಕಿಂಚಿತ್ತು ವೈಯಕ್ತಿಕ ಅಭಿಪ್ರಾಯ ಗಳನ್ನು ಸೇರಿಸದೆ ಓದುಗರಿಗೆ ತಲುಪಿಸುವುದು ಒಬ್ಬ ನಿಷ್ಠಾವಂಥ ಪತ್ರಕರ್ತನ ಕರ್ತವ್ಯವಾಗಿದೆ. ಆಧುನಿಕ ಕಾಲಮಾನದಲ್ಲಿ ಕೈಯಲ್ಲಿ ಮೊಬೈಲ್ ಇದ್ದರೆ ಪ್ರತಿಯೊಬ್ಬರು ಒಬ್ಬ ಪತ್ರಕರ್ತನಂತೆ ಕೆಲಸ ಮಾಡಬಹುದು. ಇದರ ಮಧ್ಯೆ ಒಂದು ವಿದ್ಯಮಾನವನ್ನು ವೈeನಿಕ, ತರ್ಕಬದ್ಧ ಹಾಗೂ ಆಸಕ್ತಿದಾಯಕ ದೃಷ್ಟಿಕೋನದಲ್ಲಿ ಗ್ರಹಿಸಿ ಸುದ್ದಿ ಮಾಡುವವನೇ ಒಬ್ಬ ನುರಿತ ಪತ್ರಕರ್ತನೆನಿಸಿಕೊಳ್ಳುತ್ತಾನೆ.
ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಸಂತೋಷ್ ಕಾಚಿನಕಟ್ಟೆ ಮಾತನಾಡಿ, ಪತ್ರಕರ್ತರಾಗ ಬಯಸುವವರಿಗೆ ಇಂದು ಯಥೇಚ್ಛ ಅವಕಾಶಗಳಿವೆ. ಆಳವಾದ ಓದು, ಸತತ ಬರವಣಿಗೆ, ಆಧುನಿಕ ಮಾರುಕಟ್ಟೆ ಆಧರಿತ ಜಗತ್ತಿನ ಅವಶ್ಯಕ ಕೌಶಲ್ಯಗಳನ್ನು ಕಲಿತಲ್ಲಿ ಕಂಪನಿಗಳಲ್ಲಿ, ಮಾಧ್ಯಮಗಳಲ್ಲಿ, ಜಹೀರಾತು, ಸಿನೆಮಾ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ. ಪತ್ರಕರ್ತರಾದಲ್ಲಿ ಸಾರ್ವಜನಿಕ ಜೀವನದಲ್ಲಿರುವವ ರೊಂದಿಗೆ ಆತ್ಮೀಯ ಸಂಬಂಧ ಗಳನ್ನು ಹೊಂದಬಾರದು. ಅದು ವಿಮರ್ಶಾತ್ಮಕ ದೃಷ್ಟಿಕೋನವನ್ನು, ಹೊಸ ಸುದ್ದಿಯ ಅರಸುವ ಬುದ್ಧಿಯನ್ನು ಕೊಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಎಂ. ಆರ್. ಸತ್ಯಪ್ರಕಾಶ್, ಹಿರಿಯ ಪ್ರಾಧ್ಯಾಪಕರಾದ ಡಾ. ವರ್ಗೀಸ್, ಡಾ. ಸತೀಶ್ ಕುಮಾರ್, ಪತ್ರಕರ್ತ ಜೇಸುದಾಸ್, ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶರತ್ ಕುಮಾರ್, ವಿಭಾಗದ ಉಪನ್ಯಾಸ ಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.