ಮಲೆನಾಡಿನ ಹೆಮ್ಮೆಯ ಎನ್‌ಇಎಸ್ ಜ್ಞಾನ ದೀವಿಗೆಗೆ ಅಮೃತ ಸಂಭ್ರಮ…

ಶಿವಮೊಗ್ಗ: ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಲೆನಾಡಿನ ಹೆಮ್ಮೆಯ ಪ್ರತೀಕವಾದ ರಾಷ್ಟ್ರೀಯ ಶಿಕ್ಷಣ ಸಮಿತಿಗೀಗ ಅಮೃತ ಸಂಭ್ರಮ. ಈ ನಿಮಿತ್ತ ಜೂ. ೨೦ ಮತ್ತು ೨೧ರಂದು (ನಾಳೆ ಮತ್ತು ನಾಡಿದ್ದು) ನಗರದ ಎನ್‌ಇಎಸ್ ಮೈದಾನದಲ್ಲಿ ಎನ್‌ಇಎಸ್ ಹಬ್ಬ ವಿಶೇಷ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ.
ಜೂ. ೨೦ರ ನಾಳೆ (ಮಂಗಳವಾರ) ಬೆಳಿಗ್ಗೆ ೧೦ ಗಂಟೆಗೆ ಎನ್‌ಇಎಸ್ ಹಬ್ಬದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಏರ್ಪಡಿಸಿದ್ದು, ಮುಖ್ಯಅತಿಥಿಗಳಾಗಿ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳಲಿದ್ದು, ಜೀವನವೇ ಹಾಸ್ಯ ಕುರಿತು ಗಂಗಾವತಿ ಪ್ರಾಣೇಶ್, ಹಾಸ್ಯ ಲಹರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಅಂದು ಮಧ್ಯಾಹ್ನ ೩ರಿಂದ ೯ ಗಂಟೆವರೆಗೆ  ನೃತ್ಯ, ಸಂಗೀತ, ಜಾನಪದ, ನಾಟಕ, ಮಿಮಿಕ್ರಿ, ಗಮಕ, ಮ್ಯಾಜಿಕ್ ಶೋ ಸೇರಿದಂತೆ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದ್ದು, ಈ ಸಂದರ್ಭದಲ್ಲಿ  ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಚನ್ನಬಸಪ್ಪ  ಅವರನ್ನು ಸನ್ಮಾನಿಸಲಾಗುವುದು. ಚಿತ್ರನಟ ವಸಿಷ್ಟ ಸಿಂಹ ಅತಿಥಿಗಳಾಗಿರುತ್ತಾರೆ.
ಜೂ. ೨೧ರ ಬುಧವಾರ ಬೆಳಿಗ್ಗೆ ೯.೩೦ಕ್ಕೆ ಎನ್‌ಇಎಸ್ ಹಬ್ಬದ ಸಮಾರೋಪದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳು, ಪದ್ಮ ವಿಭೂಷಣ ಪುರಸ್ಕೃತರೂ ಆದ ರಾಜರ್ಷಿ ಡಾ| ವೀರೇಂದ್ರ ಹೆಗ್ಡೆ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. 
ಎನ್‌ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣರಾವ್ ಅವರು ಅಧ್ಯಕ್ಷತೆ ವಹಿಸಲಿದ್ದು, ಎನ್‌ಇಎಸ್ ಉಪಾಧ್ಯಕ್ಷ ಸಿ.ಆರ್. ನಾಗರಾಜ್, ಕಾರ್‍ಯದರ್ಶಿ ಎಸ್.ಎನ್. ನಾಗರಾಜ್, ಸಹ ಕಾರ್‍ಯದರ್ಶಿ ಡಾ| ಪಿ. ನಾರಾಯಣ್, ಖಜಾಂಚಿ ಡಿ.ಜಿ. ರಮೇಶ್ ಉಪಸ್ಥಿತರಿರುವರು.
ಅಂದು ಬೆಳಿಗ್ಗೆ ೬ ಗಂಟೆಗೆ ಡಾ| ವೀರೇಂದ್ರ ಹೆಗ್ಡೆ ಅವರ ಉಪಸ್ಥಿತಿಯಲ್ಲಿ  ವಿಶ್ವ ಯೋಗ ದಿನಾಚರಣೆ  ಹಮ್ಮಿಕೊಳ್ಳಲಾಗಿದ್ದು, ನಾಡಿನ ಸಮಸ್ತ ಜನತೆಗೆ ಈ ಎಲ್ಲಾ ಕಾರ್ಯಕ್ರಮಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಸ್ವಾಗತ ಕೋರಿದ್ದಾರೆ.

ಎನ್‌ಇಎಸ್ ನಮ್ಮೆಲ್ಲರ ಹೆಮ್ಮೆ; ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಿ…
ಶಿವಮೊಗ್ಗ: ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತ ಮಹೋತ್ಸವ ನಿಮಿತ್ತ ಜೂ. ೨೦ ಮತ್ತು ೨೧ರಂದು ನಗರದ ಎನ್‌ಇಎಸ್ ಮೈದಾನದಲ್ಲಿ ಎನ್‌ಇಎಸ್ ಹಬ್ಬ ಜರುಗಲಿದೆ. ಈ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಎನ್‌ಇಎಸ್ ಸಂಸ್ಥೆಯಲ್ಲಿ ಕಾರ್‍ಯನಿರ್ವಹಿಸಿ ನಿವೃತ್ತರಾದ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಮತ್ತು ಎನ್‌ಇಎಸ್ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಹಳೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಾಗೂ ಪೋಷಕರಿಗೆ ಹೃದಯಪೂರ್ವಕ ಆಹ್ವಾನ ನೀಡಲಾಗಿದೆ. ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ಕೂಡ ನೀಡಲಾಗಿದ್ದು, ಮಾಧ್ಯಮಗಳ ಮೂಲಕ ಕೂಡ ಸರ್ವರನ್ನೂ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರ ವೃಂದ ಹಾಗೂ ವಿದ್ಯಾರ್ಥಿ- ಪೋಷಕ ವೃಂದದವರು ಇದು ನಿಮ್ಮದೇ ಕಾರ್ಯಕ್ರಮವೆಂದು ತಿಳಿದು ಎನ್‌ಇಎಸ್ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.