ದೇಶದ ಭವಿಷ್ಯ ಮತ್ತು ಭರವಸೆ ಯುವಜತನೆ ಮೇಲಿದೆ…
ಶಿವಮೊಗ್ಗ: ಕ್ರೀಡಾ ಇಲಾಖೆ, ರಾಜ್ಯ ಎನ್‌ಎಸ್‌ಎಸ್ ಕೋಶ, ಕುವೆಂಪು ವಿವಿ ಆಶ್ರಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಪ್ರಾರಂಭ ಗೊಂಡಿತು. ಎನ್‌ಎಸ್‌ಎಸ್ ಪ್ರಾದೇಶಿಕ ನಿರ್ದೇಶನಾಲಯದ ಅಧಿಕಾರಿ ವೈ ಎಂ ಉಪ್ಪಿನ್ ಸಮಾರಂಭವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಈ ದೇಶದ ಭವಿಷ್ಯ ಮತ್ತು ಭರವಸೆ ಯುವ ಜನರ ಮೇಲಿದೆ. ಮಾನವ ಸಂಪನ್ಮೂಲಗಳನ್ನು ಸರಿಯಾಗಿ ಬಳಕೆ ಮಾಡಬೇಕಾದರೆ ಯುವ ಜನರು ಶ್ರz ಮತ್ತು ಸಂಯಮದಿಂದ ವರ್ತಿಸುವುದರ ಜೊತೆಗೆ ದುಡಿಮೆಯ ಮೌಲ್ಯ ವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶ್ರಮ ಗೌರವ ಮತ್ತು ಜೀವನ ಮೌಲ್ಯಗಳನ್ನು ತಿಳಿಸುವ ಅತ್ಯುತ್ತಮ ವೇದಿಕೆ ಎಸ್ ಎಸ್ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಸಾಮಾನ್ಯ ಜನರೊಂದಿಗೆ ಬೆರೆಯುವ ಅತ್ಯುತ್ತಮ ಅವಕಾಶ ಇಲ್ಲಿ ನಮಗೆ ದೊರೆಯುತ್ತದೆ. ಗ್ರಾಮೀಣ ಪ್ರದೇಶದ ಜನರ ನೋವು ನಲಿವುಗಳನ್ನು ಬಹಳ ಹತ್ತಿರದಿಂದ ಗಮನಿಸುವ ಅವಕಾಶವನ್ನು ವಿದ್ಯಾರ್ಥಿಗಳು ಇಲ್ಲಿ ಪಡೆಯುತ್ತಾರೆ. ಪಠ್ಯ, ಸಂಶೋಧನೆ ಗಳ ಮೂಲಕ ಪಡೆಯುವ ಅರಿವು ಒಂದು ಬಗೆಯಾದರೆ ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಯ ಬೇಕಾಗಿರುವ ವಿಷಯಗಳು ಹಲವು. ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ವಿವಿ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ, ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ವಿವಿಧ ವೇಷ, ಭಾಷೆ, ಸಂಸ್ಕೃತಿ,ಪ್ರದೇಶಗಳು ನಮ್ಮದಾದರೂ ನಮ್ಮ ಆಲೋಚನೆ, ಗುರಿ ವಿಶ್ವಮಾನವರಾಗುವುದು. ಸಹಜ ಸಂಸ್ಕೃತಿ ಸಂವಹನ, ಸಹನೀಯತೆಯನ್ನು ರೂಡಿಸಿಕೊಳ್ಳುವುದು, ಪರರ ಬಗೆಗಿನ ಅರಿವು ಗೌರವಗಳ ಮೂಲಕ ವಿಶ್ವಬಂಧುತ್ವವನ್ನು ನಾವು ರೂಪಿಸಿಕೊಂಡಾಗಲೇ ಬದುಕಿ ಗೊಂದು ಘನತೆ ಲಭ್ಯವಾಗುತ್ತದೆ. ಈ ದೆಸೆಯಲ್ಲಿ ನಮ್ಮ ಯುವ ಜನರು ಯೋಚಿಸಬೇಕು ಎಂದರು.
ಸಿಂಡಿಕೇಟ್ ಸದಸ್ಯೆ ಡಾ. ಸಂಧ್ಯಾ ಕಾವೇರಿ, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಡಾ. ಎಂ ಕೆ ವೀಣಾ ಅವರು ಮಾತನಾಡಿದರು.
ವಿವಿಧ ರಾಜ್ಯಗಳಿಂದ ಬಂದ ಸುಮಾರು ೧೫೦ ಸ್ವಯಂಸೇವಕರು ಸಹ್ಯಾದ್ರಿ ಕಾಲೇಜಿನ ಸುತ್ತ ಮುತ್ತ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಜಥಾ ನಡೆಸಿದರು. ಏಳು ದಿನಗಳವರೆಗೆ ನಡೆಯುವ ಈ ಶಿಬಿರದಲ್ಲಿ ವಿವಿಧ ಉಪನ್ಯಾಸ ಕಾರ್ಯಕ್ರಮಗಳು, ಶ್ರಮದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ವಿವಿ ಸಂಯೋಜನಾಧಿಕಾರಿ ಡಾ| ನಾಗರಾಜ ಪರಿಸರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಂದ್ರ ಶೆಟ್ಟಿ ಪ್ರಾರ್ಥಿನಾ ಗೀತೆ ಹಾಡಿದರು. ಪ್ರಕಾಶ್ ಬಿ ಎನ್ ಉಪಸ್ಥಿತರಿದ್ದರು. ಡಾ ಶುಭಾ ಮರವಂತೆ ಕಾರ್‍ಯಕ್ರಮ ನಿರೂಪಿಸಿ, ತ್ರಿಶೂಲ್ ವಂದಿಸಿದರು.