ಶ್ರೇಷ್ಠ ಪರಂಪರೆ ಹೊಂದಿರುವ ಶಿವಮೊಗ್ಗ ನಗರವನ್ನು ಎಲ್ಲರ ಸಹಕಾರದೊಂದಿಗೆ ಮತ್ತಷ್ಟು ಸುಂದರವಾಗಿಸೋಣ: ಚನ್ನಬಸಪ್ಪ
ಶಿವಮೊಗ್ಗ: ರಾಜ್ಯದಲ್ಲಿ ಶಿವಮೊಗ್ಗ ಕ್ಷೇತ್ರ ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಶ್ರೇಷ್ಠ ಪರಂಪರೆ ಹೊಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸುಂದರ ನಗರವಾಗಿ ನಿರ್ಮಿಸಲು ಎಲ್ಲರೂ ಒಟ್ಟಾಗಿ ಸಾಗೋಣ ಎಂದು ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ನಗರದ ನೆಹರು ರಸ್ತೆ ವರ್ತಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಸಂಘಟಿತ ಪ್ರಯತ್ನದ ಪರಿಣಾಮ ಶಿವಮೊಗ್ಗ ಎಲ್ಲ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದ್ದು, ಪ್ರಸ್ತುತ ಶಿವಮೊಗ್ಗ ನಗರವನ್ನು ಮತ್ತಷ್ಟು ಸುಂದರವಾಗಿಸುವ ಹಾಗೂ ವಾಣಿಜ್ಯ ವಹಿವಾಟು ವೃದ್ಧಿಸಲು ಪೂರಕವಾಗಿರುವ ಕೆಲಸಗಳನ್ನು ನಿಮ್ಮೆಲ್ಲರ ಸಹಕಾರದಿಂದ ಮಾಡುತ್ತೇನೆ ಎಂದು ತಿಳಿಸಿದರು.
ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ಬೇಡಿಕೆಗಳನ್ನು ಸರಿಯಾದ ರೀತಿಯಲ್ಲಿ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡುವ ಹಾಗೂ ಕಾರ್ಯರೂಪಕ್ಕೆ ತರುವ ದೃಷ್ಠಿಯಿಂದ ಸಂಘಟಿತರಾಗಿ ಪ್ರಯತ್ನ ಮಾಡುವುದು ಅತ್ಯಂತ ಅವಶ್ಯಕ. ನೆಹರು ರಸ್ತೆ ವರ್ತಕರ ಸಂಘವು ನೂತನ ಶಾಸಕರಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದರು.
ಶಿವಮೊಗ್ಗ ಜಿಯ ಆರ್ಥಿಕ ವಹಿವಾಟು ವೃದ್ಧಿಸುವಲ್ಲಿ ಎಲ್ಲ ಕ್ಷೇತ್ರದ ವರ್ತಕರ ಪಾತ್ರವು ಅತ್ಯಂತ ಮುಖ್ಯ. ಶಿವಮೊಗ್ಗದ ಸರ್ವತೋಮುಖ ಅಭಿವೃದ್ಧಿ ದೃಷ್ಠಿಯಿಂದ ಶಾಸಕರಿಗೆ ಅಗತ್ಯ ಬೇಡಿಕೆ ಸಲ್ಲಿಸುವ ಜತೆಯಲ್ಲಿ ಈಡೇರಿಸಿಕೊಳ್ಳಲು ಸಂಘಟಿತರಾಗಿ ಪ್ರಯತ್ನ ನಡೆಸುವುದು ಮುಖ್ಯ. ಪ್ರವಾಸೋದ್ಯಮ, ವಾಣಿಜ್ಯ ವಹಿವಾಟು ಹೆಚ್ಚಿಸಲು ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದು ತಿಳಿಸಿದರು.
ನೆಹರು ರಸ್ತೆ ವರ್ತಕರ ಸಂಘದ ವತಿಯಿಂದ ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಸನ್ಮಾನಿಸಲಾಯಿತು. ಶಿವಮೊಗ್ಗ ನಗರದ ನೆಹರು ರಸ್ತೆಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ನೆಹರು ರಸ್ತೆ ವರ್ತಕರ ಸಂಘದ ಪ್ರಮುಖರಾದ ರಂಗನಾಥ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವರ್ತಕ ಗಿರೀಶ್ ಆರ್. ಕಾರ್ಯಕ್ರಮ ನಿರೂಪಿಸಿ ದರು. ಹಿರಿಯ ವರ್ತಕ ನಾರಾಯಣರಾವ್, ಪಾಲಿಕೆ ಸದಸ್ಯೆ ಮೀನಾ ಗೋವಿಂದರಾಜ್, ಪ್ರಮುಖರಾದ ಕುಮಾರ್, ಸುರೇಶ್, ಗಿರೀಶ್ ಜಿ., ಮರುಳೇಶ್, ಸತೀಶ್, ಚಂದ್ರು, ಜಗದೀಶ್, ಸದಾನಂದ್, ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.