ತಾಲೂಕಿನ ಅಭಿವೃದ್ಧಿ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನ್ಯಾಯವಾದಿಗಳು ಸೂಕ್ತ ಮಾರ್ಗದರ್ಶನ ನೀಡಿ: ವಿಜಯೇಂದ್ರ

ಶಿಕಾರಿಪುರ: ಜನಸಾಮಾನ್ಯರ ತೊಂದರೆ ಸಮಸ್ಯೆಗಳ ಬಗ್ಗೆ ನ್ಯಾಯವಾದಿಗಳು ಗಮನ ಸೆಳೆಯುವ ಜತೆಗೆ ತಾಲೂಕಿನ ಜನತೆಯ ಅನುಕೂಲಕ್ಕಾಗಿ ಕೈಗೊಳ್ಳಬೇಕಾದ ವ್ಯವಸ್ಥೆ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡು ವಂತೆ ನೂತನ ಶಾಸಕ ಬಿ.ವೈ ವಿಜಯೇಂದ್ರ ಮನವಿ ಮಾಡಿದರು.
ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿನ ವಕೀಲರ ಭವನದಲ್ಲಿ ಸೌಹಾರ್ಧ ಯುತವಾಗಿ ನ್ಯಾಯವಾದಿಗಳನ್ನು ಬೇಟಿ ಮಾಡಿ ಮಾತನಾಡಿದ ಅವರು, ಚುನಾವಣಾಪೂರ್ವದಲ್ಲಿ ಮತಯಾಚನೆ ಸಂದರ್ಭದಲ್ಲಿ ತಾಲೂಕಿನ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿದಾಗ ತಾಲೂಕಿ ನಾದ್ಯಂತ ಅಭಿವೃದ್ದಿ ಕಾರ್ಯಗಳ ಮಹಾಪೂರ ಕಂಡು ಬಂದಿದ್ದು ಶಾಸಕನಾಗಿ ಆಯ್ಕೆಯಾದ ನಂತರ ದಲ್ಲಿ ಕೈಗೊಳ್ಳಬೇಕಾದ ಅಭಿವೃದ್ದಿ ಉಳಿದಿಲ್ಲ ಎಂಬುದನ್ನು ಅರಿತಿದ್ದಾಗಿ ತಿಳಿಸಿದ ಅವರು, ಕ್ಷೇತ್ರದ ಮತದಾರರು ತಂದೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಹೋದರ ಸಂಸದ ಬಿ.ವೈ. ರಾಘವೇಂದ್ರ ಅವರುಗಳು ತಾಲೂಕು ಸಮಗ್ರ ಅಭಿವೃದ್ದಿ ಗೊಳಿಸಿರುವುದನ್ನು ಮನಗಂಡು ಗೌರವಯುತವಾಗಿ ಮತ ನೀಡಿ ಜಯಗಳಿಸಲು ಕಾರಣಕರ್ತ ರಾಗಿದ್ದಾರೆ ಎಂದು ತಿಳಿಸಿದರು.

ಇದೀಗ ಕ್ಷೇತ್ರದ ಶಾಸಕನಾಗಿ ಜವಾಬ್ದಾರಿ ಹೆಚ್ಚಿದ್ದು, ತಾಲೂಕಿನಲ್ಲಿ ಗುಡಿ ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿ ಗ್ರಾಮೀಣ ಯುವ ಜನತೆಗೆ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ದಿಸೆಯಲ್ಲಿ ಹೆಚ್ಚಿನ ಗಮನ ನೀಡುವುದಾಗಿ ತಿಳಿಸಿದ ಅವರು, ನ್ಯಾಯವಾದಿಗಳು ಜನಸಾಮಾನ್ಯರ ತೊಂದರೆ ಸಮಸ್ಯೆ ಯನ್ನು ಸಮೀಪದಿಂದ ಅರಿಯುವ ಅವಕಾಶ ಹೊಂದಿದ್ದು ಈ ದಿಸೆಯಲ್ಲಿ ತಾಲೂಕಿನ ಸಮಸ್ಯೆಯ ಬಗ್ಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.
ನಾನು ನಿಮ್ಮ ರೀತಿಯಲ್ಲಿಯೇ ಕಾನೂನು ಶಿಕ್ಷಣ ಪಡೆದಿದ್ದು ಇಲ್ಲಿನ ಕೆಲವರು ಸಹಪಾಠಿಯಾಗಿದ್ದಾರೆ ನಿಮ್ಮ ಜತೆ ಬೆಳೆದಿದ್ದೇನೆ. ನನ್ನನ್ನು ನಿಮ್ಮವನು ಎಂದು ಭಾವಿಸಿ ಯಾವುದೇ ಮುಚ್ಚುಮರೆ ಇಲ್ಲದೆ ಸೂಕ್ತ ಸಲಹೆ, ತಪ್ಪಿದಲ್ಲಿ ಮಾರ್ಗದರ್ಶನ ನೀಡುವ ಮೂಲಕ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುವ ರೀತಿ ಬೆಳೆಸುವಂತೆ ಮನವಿ ಮಾಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಹಿರಿಯ ನ್ಯಾಯವಾದಿ ಕೆ.ಜಿ ರುದ್ರಪ್ಪಯ್ಯ ಮಾತನಾಡಿ, ವಿಜಯೇಂದ್ರ ಶಾಸಕರಾಗಿ ನೂತನವಾಗಿ ಆಯ್ಕೆಯಾಗಿದ್ದರೂ ತಂದೆ ಯಡಿಯೂರಪ್ಪನವರ ಗರಡಿಯಲ್ಲಿ ಪಳಗಿದ್ದಾರೆ ಜನ ಸಾಮಾನ್ಯರ ನೋವು ಸಮಸ್ಯೆಯನ್ನು ಅತ್ಯಂತ ಸಮೀಪದಿಂದ ಅರಿತಿದ್ದಾರೆ ಈ ದಿಸೆಯಲ್ಲಿ ಪರಿಹಾರವನ್ನು ರೂಪಿಸಬಲ್ಲ ಸಮರ್ಥ ನಾಯಕ ರಾಗಿ ಗುರುತಿಸಿಕೊಂಡಿದ್ದಾರೆ ಎಂದು ತಿಳಿಸಿ, ರಾಜ್ಯಾದ್ಯಂತ ಯುವ ವರ್ಚಸ್ವಿ ನಾಯಕರಾಗಿ ಎಲ್ಲರ ಜತೆ ಉತ್ತಮ ಸಂಬಂದ ಹೊಂದಿದ್ದು ಈ ದಿಸೆಯಲ್ಲಿ ಭವಿಷ್ಯದ ನಾಯಕರಾಗಿ ತಂದೆ ಯಡಿಯೂರಪ್ಪನವರ ರೀತಿಯಲ್ಲಿ ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮಲಿದ್ದಾರೆ ಎಂದರು.

ನಂತರದಲ್ಲಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ಕಂದಾಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾರದ ನಿರ್ದಿಷ್ಟ ದಿನದಂದು ಉಪವಿಭಾಗಾಧಿಕಾರಿಗಳ ನ್ಯಾಯಾಲಯ ಆರಂಭಿಸು ವಂತೆ ಹಾಗೂ ಪಟ್ಟಣದಲ್ಲಿ ಎಆರ್‌ಟಿಒ ಕಚೇರಿಯನ್ನು ಕೂಡಲೇ ಆರಂಭಿಸಿ ಜನತೆ ಅಲೆದಾಟ ತಪ್ಪಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಬದಲ್ಲಿ ವಕೀಲರ ಸಂಘದ ಅಧ್ಯಕ್ಷ ಪಿ.ಸಿ ಕೆರೆಸ್ವಾಮಿಗೌಡ, ಕಾರ್ಯದರ್ಶಿ ಹೇಮರಾಜ್ ಹಿರಿಯ ನ್ಯಾಯವಾದಿ ಚಂದ್ರಪ್ಪ, ಸಂತೋಷ ಕುಮಾರ್, ಜಿ.ಪಿ ಶಿವರಾಜ್, ಸಿ.ಎಂ ಮಾರವಳ್ಳಿ, ಯಾದವಮೂರ್ತಿ, ಲಕ್ಷ್ಮಣಪ್ಪ, ಈಶ್ವರಪ್ಪ, ರಾಜುನಾಯ್ಕ, ಶಿವಮೂರ್ತಿ ಮತ್ತಿತರರು ಹಾಜರಿದ್ದರು.