ಉದ್ಯಮದಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯ: ರುದ್ರೇಗೌಡ

ಶಿವಮೊಗ್ಗ: ಉದ್ಯಮದಲ್ಲಿ ಯಶಸ್ಸು ಸಾಧಿಸಲು ಬದ್ಧತೆ ಹಾಗೂ ಪ್ರಾಮಾಣಿಕತೆ ಅತ್ಯಂತ ಮುಖ್ಯ ಆಗಿರುತ್ತದೆ. ವ್ಯಾಪಾರ ವಹಿವಾಟು ನಡೆಸುವವರು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು. ಗೆಲುವು ದೊರೆಯುವುದು ನಿಶ್ಚಿತ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಆರ್‌ಎಂಬಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿ, ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಒಬ್ಬರಿಗೆ ಒಬ್ಬರು ಸಹಕಾರ ಮಾಡಿಕೊಂಡು ಮುನ್ನಡೆ ಯಲು ರೋಟರಿ ಉತ್ತಮ ಪ್ರೋತ್ಸಾಹ ನೀಡುತ್ತಿದೆ ಎಂದರು.
ರೋಟರಿ ಆರ್‌ಎಂಬಿ ಸಂಸ್ಥೆಯು ನ್ಯಾಯಯುತ ಮೌಲ್ಯ ಗುಣಗಳೊಂದಿಗೆ ವ್ಯಾಪಾರದಲ್ಲಿ ಉನ್ನತಿ ಸಾಧಿಸಲು ಅಗತ್ಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಶಿವಮೊಗ್ಗ ಜಿಯಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ಆಶಿಸಿದರು.

ಸಂಸ್ಥೆಯ ನಿರ್ಗಮಿತ ಅಧ್ಯಕ್ಷ ವಸಂತ ಹೋಬಳಿದಾರ್ ಮಾತನಾಡಿ, ಸಂಸ್ಥೆ ಬೆಳೆಯಲು ಸಹಕರಿಸಿದ ಅರುಣ್ ದೀಕ್ಷಿತ್, ಮೋಹನ್ ಮತ್ತು ಇಡೀ ತಂಡವನ್ನು ನೆನಪಿಸಿಕೊಂಡರು. ಈವರೆಗಿನ ಸಾಧನೆ ನನಗೆ ನೆಮ್ಮದಿ ತಂದಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಎಚ್.ಎಸ್. ಮೋಹನ್ ಮಾತನಾಡಿ, ಅಧಿಕಾರ ಸ್ವೀಕರಿಸಿ ತಮ್ಮ ತಂಡವನ್ನು ಪರಿಚಯಿಸಿ ಅರ್.ಎಮ್.ಬಿ ಸಂಸ್ಥೆಗೆ ಇನ್ನೂ ಹೆಚ್ಚಿನ ಸದಸ್ಯರು ಕೈ ಜೋಡಿಸಬೇಕು. ಅಧಿಕ ಸಂಖ್ಯೆಯ ಸದಸ್ಯರಿಂದ ವ್ಯಾಪಾರ ವಹಿವಾಟು ಹೆಚ್ಚುವುದರೊಂದಿಗೆ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ನಿರ್ಮಿಸಬಹುದು ಎಂದರು.
ನೂತನ ಕಾರ್ಯದರ್ಶಿ ರವೀಂದ್ರನಾಥ ಐತಾಳ ಪ್ರಾಸ್ತಾವಿಕ ಮಾತನಾಡಿ, ಈವರೆಗೆ ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆಯ ೩೦ ತಿಂಗಳ ಸಾಧನೆಯ ೨೨ ಕೋಟಿ ವ್ಯವಹಾರದ ಸಂತಸದ ಸಂಗತಿಯನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಮಂಜು ನಾಥ ಕದಂ ಉಪಸ್ಥಿತರಿದ್ದರು.