ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ್ ನಾಯ್ಕರ ಗೆಲುವು ನಿಶ್ಚಿತ: ಮಾಜಿ ಸಿಎಂ ಬಿಎಸ್‌ವೈ

ಶಿವಮೊಗ್ಗ: ಬಿಜೆಪಿ ೧೩೦ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಗ್ರಾಮಾಂತರ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವ ಅಶೋಕನಾಯ್ಕ ಅವರ ಗೆಲುವು ನೂರರಷ್ಟು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆನವೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷ ಜತೀಯ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುವ ಕನಸು ಕಾಣುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಹೆಸರಿಲ್ಲದೇ ಕಳೆದುಹೋಗಿದೆ. ಇನ್ನೂ ಅಲ್ಪ ಸ್ವಲ್ಪ ಉಸಿರಾಡುತ್ತಿರುವುದು ಕರ್ನಾಟಕ ದಲ್ಲಿ ಮಾತ್ರ. ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿಯೂ ನೆಲಕಚ್ಚುವುದು ನಿಶ್ಚಿತ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಆಗಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ರೈತರ ಜೀವನ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿವೆ. ಡಬಲ್ ಇಂಜಿನ್ ಸರ್ಕಾರದ ಆಡಳಿತ ಇರುವ ಕಾರಣ ಕರ್ನಾಟಕ ರಾಜ್ಯವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಅಭಿವೃದ್ಧಿ ಕೆಲಸಗಳು ನಿರಂತರ ಆಗಬೇಕಾದರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು. ಗ್ರಾಮಾಂತರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಅಶೋಕ ನಾಯ್ಕ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿ ಕೃಷಿ ಬಜೆಟ್ ಮಂಡಿಸಿದ ಜನಪ್ರಿಯ ನಾಯಕ ಬಿ.ಎಸ್. ಯಡಿಯೂರಪ್ಪ. ರೈತರ ಪರ ವಿಶೇಷ ಕಾಳಜಿ ಹೊಂದಿರುವ ನಾಯಕ ನಮ್ಮೆಲ್ಲರ ಯಡಿಯೂರಪ್ಪ. ಅವರ ಆಶೀರ್ವಾದದಿಂದ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಯಿತು. ಗ್ರಾಮಾಂತರ ಕ್ಷೇತ್ರದ ಎಲ್ಲ ಪ್ರಸ್ತಾವನೆಗಳಿಗೂ ಒಪ್ಪಿಗೆ ಸೂಚಿಸಿ ಅನುದಾನ ಬಿಡುಗಡೆ ಮಾಡುತ್ತಿದ್ದರು. ಗ್ರಾಮಾಂತರ ಕ್ಷೇತ್ರ ಯಡಿಯೂರಪ್ಪನವರ ಮೆಚ್ಚಿನ ಕ್ಷೇತ್ರ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ರಾಜ್ಯ ಹಾಗೂ ಶಿವಮೊಗ್ಗ ಜಿಯಲ್ಲಿ ಅಭಿವೃದ್ಧಿ ಪರ್ವ ಆರಂಭ ಆಗಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ, ಬಿಎಸ್‌ವೈ ಅವಧಿಯಲ್ಲಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನತೆ ಸೇರಿದಂತೆ ಎಲ್ಲ ವರ್ಗದ ಜನರಿಗೂ ಉಪಯುಕ್ತ ವಾಗುವ ಯೋಜನೆ ಗಳನ್ನು ಅನುಷ್ಠಾನ ಮಾಡಿzರೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ತರಲು ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಪ್ರಭಾರಿ ಎಸ್.ದತ್ತಾತ್ರಿ ಮಾತನಾಡಿ, ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ಅಶೋಕ ನಾಯ್ಕ ಅವರು ಅನುದಾನ ನೀಡದೇ ಇರುವ ಗ್ರಾಮ ಪಂಚಾಯಿತಿಗಳೇ ಇಲ್ಲ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕೋಟ್ಯಾಂತರ ರೂ. ಅನುದಾನ ನೀಡಿ ಕ್ಷೇತ್ರದ ಎಲ್ಲ ಗ್ರಾಮಗಳ ಸಮಗ್ರ ಅಭಿವೃದ್ಧಿ ನಡೆಸಿzರೆ. ಅಶೋಕ ನಾಯ್ಕರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಬಿಜೆಪಿ ಮುಖಂಡ ಡಾ. ಧನಂಜಯ ಸರ್ಜಿ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ದೇಶ ಮುನ್ನಡೆಯುತ್ತಿದ್ದು, ವಿಶ್ವದ ಪ್ರಭಾವಿ ದೇಶಗಳು ಸಹ ಭಾರತದ ನೆರವು ಕೇಳುವ ಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಅತ್ಯಂತ ಸಂಘಟಿತರಾಗಿ ಕಾರ್ಯ ನಿರ್ವಹಿಸುವ ಪಕ್ಷ ನಮ್ಮ ಬಿಜೆಪಿ. ದೇಶದ ಸುರಕ್ಷತೆಗೆ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನಿರಂತರವಾಗಿ ಸುಳ್ಳು ಘೋಷಣೆಗಳನ್ನು ಮಾಡಿ ಕೊಂಡು ಜನರನ್ನು ಯಾಮಾರಿಸುವ ಪ್ರಯತ್ನ ಮಾಡು ತ್ತಿದೆ. ಕಾಂಗ್ರೆಸ್ ಪಕ್ಷದ ಸುಳ್ಳು ಘೋಷಣೆಗಳಿಗೆ ಮರುಳಾಗಬೇಡಿ, ಕಾಂಗ್ರೆಸ್ ಪಕ್ಷದ ಘೋಷಣೆಗಳಿಗೆ ಅಗತ್ಯವಿರುವಷ್ಟು ಅನುದಾನ ರಾಜ್ಯದ ಬಜೆಟ್‌ಗಿಂತ ಮೀರಿದೆ. ಅವರ ಘೋಷಣೆ ಕಾರ್ಯರೂಪಕ್ಕೆ ಬರಲು ಸಾಧ್ಯವಿಲ್ಲ ಎಂದರು.
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರು ಮತ್ತು ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಅಗತ್ಯ ನೆರವು ನೀಡುವ ಕೆಲಸ ನಿರಂತರವಾಗಿ ಮಾಡುತ್ತಿವೆ. ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಆಗಮಿಸಿದ್ದರು. ಗ್ರಾಮಾಂತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಉತ್ತರಖಂಡ ಮಾಜಿ ಶಾಸಕ ಮುಖೇಶ್ ಸಿಂಗ್ ಕೋಲಿ, ಮಂಡಲ ಅಧ್ಯಕ್ಷ ಮಂಜುನಾಥ ಕಲ್ಲಜ್ಜನಾಳ್, ರತ್ನಾಕರ ಶೆಣೈ, ಪ್ರಧಾನ ಕಾರ್ಯದರ್ಶಿ ಮಶ್, ತಮ್ಮಡಿಹಳ್ಳಿ ನಾಗರಾಜ್, ಉಜ್ಜಿನಪ್ಪ, ಷಡಾಕ್ಷರಪ್ಪ, ಜಗದೀಶ್ ಗೌಡ, ಸುರೇಶ್, ರಂಗೋಜಿರಾವ್, ಸುಧಾಮಣಿ, ಸ್ಥಳೀಯ ಮುಖಂಡರು ಹಾಜರಿದ್ದರು.