ಶಿವಮೊಗ್ಗ ಜಿಲ್ಲೆಗೆ 3 ಮೊಬೈಲ್ ಮೆಡಿಕಲ್ ಯೂನಿಟ್ ಮಂಜೂರು…

0
dinesh-1

ಶಿವಮೊಗ್ಗ : ಸರ್ಕಾರಿ ಆಸ್ಪತ್ರೆಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಜಿಲ್ಲೆಯ ಸಾಗರ, ಹೊಸನಗರ ಮತ್ತು ಶಿವಮೊಗ್ಗ ಗ್ರಾಮಾಂತರ ತಾಲೂಕು ಗಳಿಗೆ ತಲಾ ಒಂದು ಮೊಬೈಲ್ ಮೆಡಿಕೇರ್ ಯುನಿಟ್‌ಗಳನ್ನು ಮಂಜೂರು ಮಾಡಲಾಗಿದ್ದು, ಜನವರಿ ಮಾಹೆಯಿಂದಲೇ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.
ಶಿವಮೊಗ್ಗ ಡಿಸಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಗಳು ಹಾಗೂ ಸಿಬ್ಬಂದಿಗಳ ಸಮಾಲೋ ಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಜ್ಯದ ೩೪೦ ಆರೋಗ್ಯ ಕೇಂದ್ರಗಳಿಗೆ ಹೊಸ ಅಂಬುಲೆನ್ಸ್ ನೀಡಲಾಗಿದೆ ಎಂದರು.
೨ದಿನಗಳ ಭೇಟಿ ಸಂದರ್ಭದಲ್ಲಿ ಜಿಲ್ಲೆಯ ಸಾಗರ, ಸೊರಬ, ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕುಗಳ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಾಗಿದ್ದು, ಅಗತ್ಯವಿರುವ ಬೇಡಿಕೆಗಳ ಪೂರೈಕೆಗೆ ತುರ್ತು ಹಾಗೂ ಆದ್ಯತೆಯನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಲಾಖೆಯಲ್ಲಿ ಕೊರತೆ ಇರುವ ಕ್ಷೇತ್ರವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರು ಹಾಗೂ ವೈದ್ಯಕೀಯ ಸಿಬ್ಬಂಧಿಗಳ ನೇಮಕಕ್ಕೆ ಶೀಘ್ರ ಕ್ರಮ ವಹಿಸಲಾಗುವುದು ಎಂದ ಅವರು, ಚಂದ್ರಗುತ್ತಿ ಮತ್ತು ಕೋಣಂದೂರು ಗ್ರಾಮಗಳಲ್ಲಿ ಆರೋಗ್ಯ ಇಲಾಖೆಯ ಸುಸಜ್ಜಿತ ಕಟ್ಟಡವಿದೆ. ಅಗತ್ಯವಾಗಿರುವ ಸಿಬ್ಬಂಧಿ ಹಾಗೂ ಮೂಲಭೂತ ಪರಿಕರಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾಗರ ಮತ್ತು ಭದ್ರಾವತಿ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಭದ್ರಾವತಿಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದರು.
ಡೇಕೇರ್ ಫಿಸಿಯೋಥೆರಪಿ ಕೇಂದ್ರಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಸಲಾಗುವುದು. ಜಿಲ್ಲೆಯ ಖಾಸಗಿ ಸ್ತ್ರೀರೋಗ ಮತ್ತು ಪ್ರಸೂತಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಶಸ್ತ್ರಚಿಕಿತ್ಸೆಗಳು ಹೆಚ್ಚಾಗಿವೆ. ಇವುಗಳನ್ನು ನಿಯಂತ್ರಿಸಿ, ಸಹಜ ಹೆರಿಗೆ ಆದ್ಯತೆ ನೀಡುವಂತೆ ಪ್ರಸೂತಿ ವೈದ್ಯರಿಗೆ ಸೂಚಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಶೇ.೭೦ರಷ್ಟಿರುವ ಆಪರೇಶನ್‌ಗಳ ಪ್ರಮಾಣ ಶೇ.೨೫ಕ್ಕೆ ಇಳಿಸುವಂತೆ ಸಲಹೆ ನೀಡಿದೆ ಎಂದರು.
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವಿಧಿಸುತ್ತಿರುವ ದರವನ್ನು ಜನಸಾಮಾನ್ಯರಿಗೆ ಕಾಣುವಂತೆ ದರಪಟ್ಟಿ ಪ್ರದರ್ಶಿಸಬೇಕು. ತಪ್ಪಿದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಅಂತಹ ಆಸ್ಪತ್ರೆಗಳ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ತಜ್ಞವೈದ್ಯರ ನೇಮಕ, ಫಾರ್ಮಾಸಿಸ್ಟ್‌ಗಳ ನೇಮಕ, ಹೊರಗುತ್ತಿಗೆ ನೌಕರರ ಖಾಯಂಮಾತಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಕಲಿ ವೈದ್ಯರು ಹಾಗೂ ಆಯುಷ್ ವೈದ್ಯರಾಗಿದ್ದು, ಆಲೋಪತಿ ಸೇವೆ ಒದಗಿಸುತ್ತಿರುವ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಆರೋಗ್ಯ ಇಲಾಖೆಯ ಆಯುಕ್ತ ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಸಿಇಓ ಎನ್.ಹೇಮಂತ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|| ನಟರಾಜ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *