ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆಗಳ ಪಾತ್ರ ಮಹತ್ತರ: ಸ್ವಾಮೀಜಿ

ನ್ಯಾಮತಿ: ಶಾಸಕಾಂಗ, ಕಾರ್ಯಂಗ, ನ್ಯಾಯಾಂಗದ ಸೇತುವೆಯಂತೆ ಕಾರ್ಯ ನಿರ್ವಹಿಸುವ ಪತ್ರಿಕೆಗಳ ಪಾತ್ರವು ಅತ್ಯಂತ ಪ್ರಮುಖವಾಗಿದೆ ಎಂದು ಬಾಳೆಹೊನ್ನೂರಿ ರಂಭಾಪುರಿ ಪೀಠದ ಡಾ| ವೀರಶೈವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ನ್ಯಾಮತಿ ತಾಲೂಕು ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ನ್ಯಾಮತಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಗೋವಿನ ಕೋವಿ ಹಾಲಸ್ವಾಮಿ ಮಠದ ಸೇವಾ ಸಮಿತಿಯವರು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು.
ಮುಖ್ಯವಾಗಿ ತಮಗೂ ಪತ್ರಿಕೋಧ್ಯಮಕ್ಕೂ ಬಹಳ ದಿನಗಳ ನಂಟು ಇದೆ. ಪೂರ್ವಾಶ್ರಮದಲ್ಲಿ ಇಂದಿನ ನಾವು ಸಹ ಒಂದು ಪತ್ರಿಕೆಯನ್ನು ನಡೆಸಿದ್ದು, ಅದರ ಸಂಕಷ್ಟ ಏನೆಂಬ ಅರಿವು ನಮಗೂ ಸಹ ತಿಳಿದಿದೆ. ಆದ್ದರಿಂದ ಇಂದು ನಾವು ಕರ್ನಾಟಕದ ತುದಿಯಲ್ಲಿ ರುವ ಬೀದರ್‌ಗೆ ಪ್ರಯಾಣ ಮಾಡಬೇಕಾಗಿದ್ದರೂ ಸಹ ಪತ್ರಕರ್ತರ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇವೆ ಎಂದರು.
ಸಮಾಜದ ಅಂಕು ಡೊಂಕು ಗಳನ್ನು ತಿದ್ದುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ. ಪತ್ರಕರ್ತರಿಗೆ ಆರೋಗ್ಯ, ಸಾರಿಗೆ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಅವರು ಸಲಹೆ ನೀಡಿದರು
ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಲೋಕೇಶ್ ಮಾತಾಡಿ, ರಾಜ್ಯ ಸರ್ಕಾರವು ಪ್ರತೀ ತಾಲೂಕಿನ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಬೇಕು ನಿವೇಶನ ಮನೆರಹಿತ ಪತ್ರಕರ್ತರಿಗೆ ನಿವೇಶನ ಮತ್ತುಮನೆಗಳನ್ನು ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಶಾಂತನಗೌಡ ಅವರು, ಸರ್ಕಾರ ದಲ್ಲಿ ನಿವೇಶನ ಕೊಡುವುದು ಕಷ್ಟದ ಕೆಲಸ. ಆದರೆ ನಿವೇಶನ ಇರುವ ಪತ್ರಕರ್ತರು ಯಾರಾದರೂ ಇದ್ದಲ್ಲಿ ಅವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ವ್ಯವಸ್ಥೆಯನ್ನು ಮಾಡಿಸುವ ಭರವಸೆಯನ್ನು ನೀಡಿದರು.
ನ್ಯಾಮತಿ ತಾಲೂಕು ಗ್ರೇಡ್ ೨ ಶಹಸಿಲ್ದಾರ್ ಗೋವಿಂದಪ್ಪ, ಗ್ರಾಪಂ ಅಧ್ಯಕ್ಷೆ ಶಶಿಕಲಾ ನಟರಾಜ್, ನ್ಯಾಮತಿ ಪಿಎಸ್‌ಐ ರಮೇಶ್, ಪ್ರಮುಖರಾದ ಹತ್ತೂರು ಮಟದ ಗಂಗಾಧರಯ್ಯ , ಎಸ್‌ಎಂ ಶಾಸ್ತ್ರಿ ಹೊಳೆಮಠ, ಶ್ವೇತಾ ಹಾಲೇಶ್, ಉಮಾದೇವಿ ಚೆನ್ನೇಶ, ಸತ್ಯಂ ಸದಾಶಿವಯ್ಯ ಷಣ್ಮುಖ, ಬಿ ವಿ ಹಳದಪ್ಪ, ಎಂಪಿಎಂ ಷಣ್ಮುಖಯ್ಯ ಹಾಗೂ ಗೋವಿನ ಕೋವಿ ಹಾಲಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳು ಇದ್ದರು.